ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.
ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ. ನಗರ ನಿವಾಸಿಯಾಗಿರುವ ಸುಮಂತ್, ಗವೇನಹಳ್ಳಿ ಬಳಿ ತನ್ನ ಬೈಕ್ ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದ. ವ್ಹೀಲಿಂಗ್ ಮಾಡದಂತೆ ಗವೇನಹಳ್ಳಿ ಗ್ರಾಮದ ಯುವಕರು ಹೇಳಿದ್ದಾರೆ. ಇದೇ ವಿಚಾರಕ್ಕೆ ಸುಮಂತ್ ಹಾಗೂ ಗವೇನಹಳ್ಳಿ ಗ್ರಾಮದ ಯುವಕರ ನಡುವೆ ಗಲಾಟೆ ಆರಂಭವಾಗಿದೆ. ಆಗ ಗ್ರಾಮಸ್ಥರು ಜಗಳ ಬಿಡಿಸಿ ಕಳುಹಿಸಿದ್ದಾರೆ.
ಆದರೆ, ಸುಮ್ಮನಾಗದ ಸುಮಂತ್ ಲಾಂಗ್ ಹಾಗೂ ಚಾಕುಗಳ ಜೊತೆ ತನ್ನ ಇಬ್ಬರು ಸ್ನೇಹಿತರನ್ನು ಕರೆದಕೊಂಡು ಗವೇನಹಳ್ಳಿಗೆ ಬಂದಿದ್ದಾನೆ. ವ್ಹೀಲಿಂಗ್ ಮಾಡುವುದನ್ನು ತಡೆದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಪ್ರಜ್ವಲ್ ಮತ್ತು ಕೆಲವು ಯುವಕರು ಚಾಕು, ಲಾಂಗ್ ಕಿತ್ತುಕೊಂಡ ಸುಮಂತ್ ಎದೆ ಮತ್ತು ಹೊಟ್ಟೆಗೆ ಇರಿದಿದ್ದಾರೆ. ತಕ್ಷಣ ಗಾಯಾಳು ಸುಮಂತ್ ನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುಮಂತ್ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ