ಮುಂಬಯಿ : ಆಲ್ ರೌಂಡರ್ ಸೋಫಿ ಡಿವೈನ್ ಭರ್ಜರಿ ಆಟಕ್ಕೆ ಗುಜರಾತ್ ಜೈಂಟ್ಸ್ ತಂಡವು ಸೋಲು ಒಪ್ಪಿಕೊಳ್ಳುವಂತಾಯಿತು.
ಗುಜರಾತ್ ಜೈಂಟ್ಸ್ ವಿರುದ್ಧ ಆರ್ ಸಿಬಿ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ನಿಗದಿತ ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 188 ರನ್ ಬಾರಿಸಿತ್ತು. 189 ರನ್‌ಗಳ ಬೃಹತ್ ಮೊತ್ತದ ಗುರಿ ಪಡೆದ ಆರ್‌ಸಿಬಿ ತಂಡ 15.3 ಓವರ್‌ಗಳಲ್ಲೇ 189 ರನ್ ಚಚ್ಚಿ ನಿರಾಯಾಸವಾಗಿ ಗೆಲುವು ಸಾಧಿಸಿತು.
ಆರಂಭಿಕರಾಗಿ ಕಣಕ್ಕಿಳಿದ ನಾಯಕಿ ಸ್ಮೃತಿ ಮಂದಾನ, ಸೋಫಿ ಡಿವೈನ್ ಜೋಡಿ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್ ಪತನಕ್ಕೆ ಈ ಜೋಡಿ 57 ಎಸೆತಗಳಲ್ಲಿ ಸ್ಫೋಟಕ 125 ರನ್ ಚಚ್ಚಿ ಗುಜರಾತ್ ಬೌಲರ್‌ಗಳ ಬೆವರಿಳಿಸಿತ್ತು.
2ನೇ ಓವರ್‌ನಿಂದಲೇ ಸಿಕ್ಸರ್, ಬೌಂಡರಿಗಳೊಂದಿಗೆ ಅಬ್ಬರಿಸಲು ಶುರು ಮಾಡಿದ ಸೋಫಿ ಕೇವಲ 36 ಎಸೆತಗಳಲ್ಲಿ 99 ರನ್ (9 ಬೌಂಡರಿ, 8 ಸಿಕ್ಸರ್) ಚಚ್ಚಿದರು. ಶತಕ ಬಾರಿಸಿ ಚೊಚ್ಚಲ ಡಬ್ಲ್ಯೂಪಿಎಲ್ ಆವೃತ್ತಿಯಲ್ಲೇ ದಾಖಲೆ ಬರೆಯುವ ಸನಿಹದಲ್ಲಿದ್ದಾಗ ಮೆಕ್‌ಗ್ರಾತ್ ಬೌಲಿಂಗ್ ದಾಳಿಗೆ ಔಟಾಗಿ ನಿರಾಸೆ ಅನುಭವಿಸಿದರು.
ನಂತರ ಏಲ್ಲಿಸ್ ಪೆರ್ರಿ 19 ರನ್ ಹಾಗೂ ಹೀದರ್ ನೈಟ್ 22 ರನ್ ಅಜೇಯ ಆಟವಾಡಿ ತಂಡವನ್ನು ಗೆಲುವಿನ ಹಾದಿಗೆ ತಲುಪಿಸಿದರು. ನಾಯಕಿ ಸ್ಮೃತಿ ಮಂದಾನ ಮತ್ತೊಮೆ ಬೃಹತ್ ಮೊತ್ತ ಕಲೆಹಾಕುವಲ್ಲಿ ವಿಫಲರಾದರು. 31 ಎಸೆತಗಳಲ್ಲಿ 37 ರನ್ (5 ಬೌಂಡರಿ, 1 ಸಿಕ್ಸರ್) ಗಳಿಸಿ ಪೆವಿಲಿಯನ್ ಸೇರಿದರು. ಗುಜರಾತ್ ಪರ ಕಿಮ್ ಗಾರ್ತ್ ಹಾಗೂ ಸ್ನೇಹ ರಾಣ ತಲಾ ಒಂದೊಂದು ವಿಕೆಟ್ ಪಡೆದರು.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ಅತ್ಯುತ್ತಮ ಆರಂಭ ಪಡೆಯಿತು. 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 188 ರನ್ ಗಳಿಸಿ ಆರ್‌ಸಿಬಿಗೆ ಬೃಹತ್ ಮೊತ್ತದ ಗುರಿ ನೀಡಿತ್ತು