ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಆಟೋ ಚಾಲಕರು ಹಾಗೂ ಸಂಘಟನೆಗಳು ಭಾನುವಾರ ಮಧ್ಯರಾತ್ರಿಯಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಿದ್ದಾರೆ.
ಈ ಮುಷ್ಕರ ಸೋಮವಾರ ಮಧ್ಯರಾತ್ರಿಯವರೆಗೂ ನಡೆಯಲಿದೆ. ನಗರದಲ್ಲಿ ಸಂಚರಿಸುತ್ತಿದ್ದ ಸುಮಾರು 2 ಲಕ್ಷಕ್ಕೂ ಅಧಿಕ ಆಟೋಗಳು ಬಂದ್ ಗೆ ಬೆಂಬಲ ನೀಡಿವೆ. ಹೀಗಾಗಿ ಪ್ರಯಾಣಿಕರು ಸಂಕಷ್ಟ ಅನುಭವಿಸುವಂತಾಗಿದ್ದು, ಬಿಎಂಟಿಸಿ ಬಸ್, ಮೆಟ್ರೋ, ಖಾಸಗಿ ವಾಹನ, ಟ್ಯಾಕ್ಸಿ ಹಾಗೂ ಓಲಾ, ಊಬರ್ ವಾಹನಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ.
ಬೈಕ್ ಟ್ಯಾಕ್ಸಿ ನಿಷೇಧಿಸಬೇಕೆಂದು ಆಗ್ರಹಿಸಿ ಸರ್ಕಾರಕ್ಕೆ ಆಟೋ ಚಾಲಕರು ಗಡುವು ನೀಡಿದ್ದರು. ಈ ಅವಧಿ ಮುಕ್ತಾಯವಾಗಿದೆ. ಹೀಗಾಗಿ ಇಂದು ಬೆಳಗ್ಗೆ 11 ಗಂಟೆ ನಂತರ ಸಿಎಂ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಸೋಮವಾರ ಬೆಳಗ್ಗೆ 11ಕ್ಕೆ ಸಂಗೊಳ್ಳಿ ಕ್ರಾಂತಿವೀರ ರಾಯಣ್ಣ ರೈಲ್ವೆ ನಿಲ್ದಾಣದ ಬಳಿಯಿಂದ ಚಾಲಕರು ಪಾದಯಾತ್ರೆ ಮೂಲಕ ಸಿಎಂ ಮನೆಗೆ ಮುತ್ತಿಗೆ ಹಾಕುವುದಾಗಿ ಆಟೋ ಚಾಲಕರ ಸಂಘಟನೆಗಳ ಒಕ್ಕೂಟ ತಿಳಿಸಿದೆ.
ಆಟೋ ಚಾಲಕರ ಮುಷ್ಕರದ ಹಿನ್ನೆಲೆಯಲ್ಲಿ ಎಚ್ಚೆತ್ತ ಬಿಎಂಟಿಸಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಹೆಚ್ಚಿನ ಬಸ್ ಕಾರ್ಯಾಚರಣೆಗೆ ಮುಂದಾಗಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್ ಸೇವೆ ನೀಡಲು ತಯಾರಿ ನಡೆಸಿದೆ. ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಶಾಂತಿನಗರ, ಶಿವಾಜಿನಗರ, ಯಶವಂತಪುರ ಸೇರಿದಂತೆ ಪ್ರಮುಖ ಪ್ರದೇಶಗಳಿಗೆ ಹೆಚ್ಚಿನ ಬಿಎಂಟಿಸಿ ಸೇವೆ ಒದಗಿಸಲಾಗುತ್ತಿದೆ