ನವದೆಹಲಿ : ದೇಶದ ಬೇರೆ ಬೇರೆ ರಾಜ್ಯಗಳಿಂದ ರೈತರು ಇಂದು ದೆಹಲಿಯಲ್ಲಿ ಜಮಾಯಿಸುತ್ತಿದ್ದಾರೆ. ವಿವಿಧ ರೈತ ಸಂಘಟನೆಗಳ ಯುನೈಟೆಡ್ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ) ಕಾನೂನು ಖಾತರಿಗೆ ಸಂಬಂಧಿಸಿದಂತೆ ‘ಕಿಸಾನ್ ಮಹಾಪಂಚಾಯತ್’ ಅನ್ನು ಕರೆದಿದೆ.
ಈ ಹಿನ್ನೆಲೆಯಲ್ಲಿ ದೇಶದ ಮೂಲೆಮೂಲೆಯಿಂದ ರೈತರು ತೆರಳುತ್ತಿದ್ದಾರೆ ಎಂದು ಎಸ್‌ಕೆಎಂ ಹೇಳಿಕೊಂಡಿದೆ. ದೆಹಲಿ ಪೊಲೀಸರು ‘ಕಿಸಾನ್ ಮಹಾಪಂಚಾಯತ್’ಗೆ ಭಾರಿ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದಾರೆ.
ದೆಹಲಿ ಪೊಲೀಸ್ ಅಧಿಕಾರಿಗಳ ಪ್ರಕಾರ, ರಾಮಲೀಲಾ ಮೈದಾನದಲ್ಲಿ 2,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಕಾರ್ಯಕ್ರಮವನ್ನು ಸುಗಮವಾಗಿ ನಡೆಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು 2,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾಪಂಚಾಯತ್‌ನಲ್ಲಿ ಸುಮಾರು 15,000-20,000 ಜನರು ಭಾಗವಹಿಸುವ ಸಾಧ್ಯತೆಯಿದೆ.ರಾಮ್‌ಲೀಲಾ ಮೈದಾನ, ವಿಶೇಷವಾಗಿ ಜೆಎಲ್‌ಎನ್ ಮಾರ್ಗ, ದೆಹಲಿ ಗೇಟ್, ಅಜ್ಮೇರಿ ಗೇಟ್ ಚೌಕ್ ಸುತ್ತಮುತ್ತಲಿನ ರಸ್ತೆಗಳನ್ನು ಬಳಸದಂತೆ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಸೂಚಿಸಲಾಗಿದೆ ಎಂದು ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ