Kornersite

Politics

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆ.ಎಂ. ಶಿವಲಿಂಗೇಗೌಡ

ಬೆಂಗಳೂರು : ರಾಜ್ಯದಲ್ಲಿ ಚುನಾವಣೆ ಕಾವು ಜೋರಾಗಿದೆ. ಹೀಗಾಗಿ ಪಕ್ಷಗಳು ಗೆಲ್ಲುವ ಕುದುರೆಗಳಿಗೆ ಮಣೆ ಹಾಕುತ್ತಿವೆ. ಈ ನಿಟ್ಟಿನಲ್ಲಿ ಪಕ್ಷಾಂತರಗಳು ಕೂಡ ಸಾಮಾನ್ಯವಾಗಿವೆ. ಜೆಡಿಎಸ್ ನಿಂದ ಹಲವು ಹಾಲಿ ಶಾಸಕರು ಪಕ್ಷ ತೊರೆದು ಬೇರೆ ಪಕ್ಷ ಸೇರುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅದೇ ರೀತಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಪಕ್ಷ ತೊರೆದು, ಕಾಂಗ್ರೆಸ್ ಸೇರಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ಮೇ 10ರ ಬುಧವಾರ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಹೀಗಾಗಿಯೇ ರಾಜಕೀಯ ಚಟುವಟಿಕೆಗಳು ಜೋರಾಗಿದ್ದು, ಜೆಡಿಎಸ್‌ನ ಮತ್ತೊಬ್ಬ ಶಾಸಕ ಭಾನುವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಭಾನುವಾರದಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಶಿರಸಿಯಲ್ಲಿ ಅವರ ಮನೆಯಲ್ಲಿ ಭೇಟಿ ಮಾಡಿದ ಅರಸೀಕರೆಯ ಜೆಡಿಎಸ್ ಶಾಸಕ ಕೆ. ಎಂ. ಶಿವಲಿಂಗೇಗೌಡ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಜೆಡಿಎಸ್ ತೊರೆಯುತ್ತಾರೆ ಎಂಬ ಮಾತುಗಳು ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದವು. ಅದರಂತೆ ಅವರು ಪಕ್ಷ ತೊರೆದಿದ್ದಾರೆ.
ಕಡೂರು ಶಾಸಕ ವೈ.ಎಸ್.ವಿ ದತ್ತಾ, ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್. ಆರ್. ಶ್ರೀನಿವಾಸ್. ಅರಕಲಗೂಡು ಕ್ಷೇತ್ರದ ಶಾಸಕ ಎ. ಟಿ. ರಾಮಸ್ವಾಮಿ ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಪಕ್ಷ ತೊರೆದಿದ್ದಾರೆ. ಈಗ ಈ ಪಟ್ಟಿಗೆ ಕೆ.ಎಂ. ಶಿವಲಿಂಗೇಗೌಡ ಸೇರಿದ್ದಾರೆ. ದತ್ತಾ ಹಾಗೂ ಎಸ್. ಆರ್. ಶ್ರೀನಿವಾಸ್ ಕಾಂಗ್ರೆಸ್ ಸೇರಿದ್ದಾರೆ. ಎ.ಟಿ. ರಾಮಸ್ವಾಮಿ ಬಿಜೆಪಿ ಪಕ್ಷ ಸೇರಿದ್ದಾರೆ.

ಕಳೆದ ಕೆಲವು ದಿನಗಳಿಂದ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಕಳೆದ ತಿಂಗಳು ಜೆಡಿಎಸ್ ಪಕ್ಷದ ಬೃಹತ್ ಸಮಾವೇಶ ನಡೆದಿತ್ತು. ಪಕ್ಷದ ಚಟುವಟಿಕೆಗಳಿಂದ ದೂರ ಇದ್ದ ಅರಸೀಕರೆಯ ಜೆಡಿಎಸ್ ಶಾಸಕ ಕೆ. ಎಂ. ಶಿವಲಿಂಗೇ ಗೌಡ ಸಮಾವೇಶದಲ್ಲಿ ಪಾಲ್ಗೊಂಡಿರಲಿಲ್ಲ. ಅವರ ಚಿತ್ರಗಳಿದ್ದ ಬ್ಯಾನರ್‌, ಫೆಕ್ಸ್‌ಗಳನ್ನು ಕೂಡ ತೆರವು ಮಾಡಲಾಗಿತ್ತು.

ಕೆ.ಎಂ. ಶಿವಲಿಂಗೇಗೌಡ ಅವರು ಮೂರು ಬಾರಿ ಶಾಸಕರಾಗಿದ್ದಾರೆ. ಇವರು ಮಾಜಿ ಸಿಎಂ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಪ್ತರಾಗಿದ್ದಾರೆ. ಹೀಗಾಗಿಯೇ ಇವರು ಕಾಂಗ್ರೆಸ್ ಸೇರಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಅವರು ಸಹ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಕೆ. ಎಂ. ಶಿವಲಿಂಗೇ ಗೌಡ ಅರಸೀಕರೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗುವ ನಿರೀಕ್ಷೆ ಇದೆ.
ಅರಸೀಕೆರೆಯಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಕೆ.ಎಂ. ಶಿವಲಿಂಗೇಗೌಡ ಅವರು, 2008ರಲ್ಲಿ 74,025, 2013ರ ಚುನಾವಣೆಯಲ್ಲಿ 76,579 ಮತ್ತು 2018ರ ಚುನಾವಣೆಯಲ್ಲಿ 93,986 ಮತಗಳನ್ನು ಪಡೆದು ಹ್ಯಾಟ್ರಿಕ್ ಗೆಲುವು ಸಾಧಿಸಿತ್ತು. 2018ರ ಚುನಾವಣೆ ನಂತರ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಅವರಿಗೆ ಸಚಿವ ಸ್ಥಾನ ನೀಡಿರಲಿಲ್ಲ. ಅಲ್ಲದೇ, ಈ ಸಂದರ್ಭದಲ್ಲಿ ಜೆಡಿಎಸ್ ವರಿಷ್ಠರ ವಿರುದ್ಧ ಅಸಮಾಧಾನಗೊಂಡಿದ್ದ ಕೆ. ಎಂ. ಶಿವಲಿಂಗೇಗೌಡ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಈಗ ಜೆಡಿಎಸ್ ತೊರೆಯುವ ಮೂಲಕ, ಅದೇ ಪಕ್ಷಕ್ಕೆ ಸೆಡ್ಡು ಹೊಡೆಯಲು ತಯಾರಿ ನಡೆಸಿದ್ದಾರೆ. ಈ ಚುನಾವಣೆಯಲ್ಲಿ ಶಿವಲಿಂಗೇಗೌಡ ಅವರು ಮತ್ತೊಮ್ಮೆ ಗೆದ್ದು ಬೀಗುತ್ತಾರಾ ಅಥವಾ ಜನರು ಇವರ ಪಕ್ಷಾಂತರವನ್ನು ತಿರಸ್ಕರಿಸುತ್ತಾರೆಯೇ ಕಾಯ್ದು ನೋಡಬೇಕಿದೆ

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು