Koppala : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ(Karnataka assembly election)ಯ ಚಟುವಟಿಕೆಗಳು ಗರಿಗೆದರಿವೆ. ಎಲ್ಲ ಪಕ್ಷಗಳು ಮತದಾರರನ್ನು ಸೆಳೆಯಲು ನಾನಾ ಕಸರತ್ತು ನಡೆಸುತ್ತಿವೆ. ಹೀಗಾಗಿ ಸರ್ಕಾರಿ ನಿಯಮಗಳನ್ನು ಕೂಡ ಹಲವು ಬಾರಿ ಮೀರಿ ವರ್ತಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹೀಗೆ ನೀತಿ ಸಂಹಿತೆ ಉಲ್ಲಂಘಿಸಿರುವ ಆರೋಪದ ಹಿನ್ನೆಲೆಯಲ್ಲಿ ಕೆಆರ್ ಪಿ ಪಕ್ಷ(KRPP)ದ ಆಂಬುಲೆನ್ಸ್(Ambulance) ನ್ನು ಪೊಲೀಸರು(Police) ವಶಕ್ಕೆ ಪಡೆದಿದ್ದಾರೆ.
ಕೆಆರ್ ಪಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧನ ರೆಡ್ಡಿ(GaliJanardhan Reddy) ಅವರು ಗಂಗಾವತಿ(Gangavati) ಕ್ಷೇತ್ರದಲ್ಲಿನ ಸಾರ್ವಜನಿಕರ ಅನಕೂಲಕ್ಕಾಗಿ ಇತ್ತೀಚೆಗೆ ಆಂಬುಲೆನ್ಸ್ ಸೇವೆ ಆರಂಭಿಸಿದ್ದರು. ಆದರೆ, ಆಂಬುಲೆನ್ಸ್ ನ್ನು ತಮ್ಮ ಪಕ್ಷದ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗಿದೆ ಎಂದು ಕನಕಗಿರಿ(Kanakagiri) ಪೊಲೀಸರು ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ರಾಜ್ಯದಲ್ಲಿ ಚುನಾವಣೆಗೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ನೀತಿ ಸಂಹಿತೆ ಸಮಯದಲ್ಲಿ ಮುಖಂಡರ ಭಾವಚಿತ್ರ ಬಳಸದಂತೆ ನಿಯಮ ಇದ್ದರೂ ನೂತನ ಪಕ್ಷದ ನಾಯಕ ಹಾಗೂ ಗಂಗಾವತಿ ಕ್ಷೇತ್ರದ ಅಭ್ಯರ್ಥಿ ಜನಾರ್ಧನ ರೆಡ್ಡಿ, ಬಳ್ಳಾರಿ ಅಭ್ಯರ್ಥಿ ಅರುಣಾ ಲಕ್ಷ್ಮೀ ಹಾಗೂ ಕನಕಗಿರಿ ಕ್ಷೇತ್ರದ ಅಭ್ಯರ್ಥಿ ಡಾ. ಚಾರುಲ್ ಅವರ ಭಾವಚಿತ್ರವಿರುವ ಪೋಸ್ಟರ್ ಗಳನ್ನು ಆಂಬುಲೆನ್ಸ್ ಮೇಲೆ ಅಂಟಿಸಲಾಗಿದೆ. ಹೀಗಾಗಿ ಆಂಬುಲೆನ್ಸ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಗಾಲಿ ಜನಾರ್ಧನ ರೆಡ್ಡಿ ಅವರು ನೂತನ ಪಕ್ಷ ಸ್ಥಾಪಿಸಿ, ಬಿಜೆಪಿ ಪಕ್ಷವಷ್ಟೇ ಅಲ್ಲದೇ, ತಮ್ಮ ಸಹೋದರ ಹಾಗೂ ಆಪ್ತ ಸ್ನೇಹಿತ ಶ್ರೀರಾಮುಲು ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ. ಸದ್ಯ ಗಂಗಾವತಿಯಲ್ಲಿ ಸ್ಪರ್ಧೆ ಮಾಡಿರುವ ಗಾಲಿ ಜನಾರ್ಧನ ರೆಡ್ಡಿ ಅವರು, ತಮ್ಮ ಪತ್ನಿ ಅರುಣಾ ಲಕ್ಷ್ಮೀ ಅವರನ್ನು ತಮ್ಮ ಸಹೋದರ ಸೋಮಶೇಖರ ರೆಡ್ಡಿ ವಿರುದ್ಧ ಬಳ್ಳಾರಿಯಲ್ಲಿ ಕಣಕ್ಕೆ ಇಳಿಸಿದ್ದಾರೆ. ಹೀಗಾಗಿ ಜನಾರ್ದನ ರೆಡ್ಡಿ ಅವರಿಗೆ ಈಗ ಸಹೋದರರು ಕೂಡ ವಿರೋಧಿಗಳಾಗಿದ್ದಾರೆ