Bangalore: ರಾಜ್ಯ ರಾಜಧಾನಿಯಲ್ಲಿ ನಡೆಯುವ ಕರಗ ಉತ್ಸವ(Karaga Utsav) ವಿಶ್ವವಿಖ್ಯಾತಿ ಗಳಿಸಿದೆ. ಕರಗ ಎಂದರೆ ಸಾಕು ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸುತ್ತಾರೆ. ಈ ವರ್ಷದ ಕರಗಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇದಕ್ಕೂ ಮುನ್ನ ಕರ್ಪೂರದ ಪೂಜೆಯ ಸಂದರ್ಭದಲ್ಲಿ ರಸ್ತೆ ಬದಿ ನಿಲ್ಲಿಸಿದ್ದ 10ಕ್ಕೂ ಹೆಚ್ಚು ವಾಹನಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ.
ಇಂದು ರಾತ್ರಿ ಕರಗೋತ್ಸವ (Karaga Utsav) ಹಿನ್ನೆಲೆಯಲ್ಲಿ ಪೂಜೆ, ವಿಧಿ-ವಿಧಾನಗಳು ಆರಂಭವಾಗುವುದಕ್ಕೂ ಮುನ್ನ ಎನ್ ಆರ್ ಸಿಂಗ್ನಲ್ ನಿಂದ ಧರ್ಮರಾಯ ದೇವಸ್ಥಾನದವರೆಗೂ ಕರ್ಪೂರ ಹಚ್ಚಿ ವಿಶೇಷ ಪೂಜೆ ಕೈಗೊಳ್ಳಲಾಗಿರುತ್ತದೆ. ಅಂದರೆ, ಸುಮಾರು 700 ಮೀಟರ್ ಗೂ ಅಧಿಕ ದೂರ ಕರ್ಪೂರದ ಪೂಜೆ ಪೂಜೆ ನಡೆಯುತ್ತದೆ. ಈ ಸಂದರ್ಭದಲ್ಲಿಯೇ ಈ ಅವಘಡ ನಡೆದಿದೆ.
ಈ ಕರಗ ಉತ್ಸವವರು ಮಾರ್ಚ್ 29 ರಿಂದ ಆರಂಭವಾಗುತ್ತದೆ. ಕರಗ ಉತ್ಸವದಲ್ಲಿ ಇಂದು ದ್ರೌಪದಿಗ ಹೂವಿನ ಕರಗವನ್ನು ಪೂಜಾರಿ ಜ್ಞಾನೇಂದ್ರ ಹೊತ್ತುಕೊಂಡು ಬೀದಿಗಳಲ್ಲಿ ಮೆರವಣಿಗೆ ಮಾಡಲಿದ್ದಾರೆ. ಇಂದು ರಾತ್ರಿ 12:30ಕ್ಕೆ ಕರಗ ಶಕ್ತೋತ್ಸವ ಆರಂಭವಾಗಲಿದ್ದು, ಕರಗ ಸಾಗುವ ಮಾರ್ಗದ್ದುದ್ದಕ್ಕೂ ಭಕ್ತರು ದರ್ಶನ ಪಡೆಯುತ್ತಾರೆ.
11 ದಿನಗಳ ಕಾಲ ಈ ಕರಗ ಉತ್ಸವ ನಡೆಯಲಿದ್ದು, ಇಂದು ರಾತ್ರಿ 12ರಿಂದ ಕರಗ ಶಕ್ತ್ಯೋತ್ಸವ ಹಾಗೂ ಧರ್ಮರಾಯಸ್ವಾಮಿ ಮಹಾರಥೋತ್ಸವ ನಡೆಯಲಿದೆ. ಈ ಬಾರಿಯೂ ಕರಗವನ್ನು ತಿಗಳ ಸಮುದಾಯದ ಅರ್ಚಕ ವಿ. ಜ್ಞಾನೇಂದ್ರ ಹೊರಲಿದ್ದಾರೆ. ಈ ವಿಶ್ವವಿಖ್ಯಾತ ಕರಗ ಉತ್ಸವವು ಇನ್ನೂ ಎರಡು ದಿನಗಳ ಕಾಲ ನಡೆಯಲಿದ್ದು, ಭಕ್ತರು ಆಗಮಿಸಿ, ಭಕ್ತಿಯ ಪರಾಕಾಷ್ಟೆ ಮೆರೆಯುತ್ತಾರೆ.
ಈ ಕರಗವು ಮಸ್ತಾನ್ ಸಾಬ್ ದರ್ಗಾಕ್ಕೆ ಭೇಟಿ ನೀಡಿ, ಅಲ್ಲಿಂದ ಬಳೇಪೇಟೆ, ಕಿಲಾರಿ ರಸ್ತೆ, ಯಲಹಂಕ ಗೇಟ್, ಅವೆನ್ಯೂ ರಸ್ತೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರ ಪೇಟೆಗಳಲ್ಲಿ ಸಾಗುತ್ತದೆ. ಈ ಸಂದರ್ಭದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸುತ್ತಾರೆ. ಹಾಲುಬೀದಿ, ಕಬ್ಬನ್ಪೇಟೆ, ಸುಣ್ಣಕಲ್ ಪೇಟೆ ಮಾರ್ಗವಾಗಿ ಕುಲ ಪುರೋಹಿತರ ಮನೆಗಳಲ್ಲಿ ಪೂಜೆ ಸ್ವೀಕರಿಸಿ ನಂತರ ನರಸಿಂಹ ಜೋಯಿಸ್ ಗಲ್ಲಿ ಮಾರ್ಗವಾಗಿ ಸೂರ್ಯೋದಯದ ವೇಳೆಗೆ ಕರಗವು ದೇವಾಲಯವನ್ನು ತಲುಪುತ್ತದೆ.
ಕರಗದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಧರ್ಮರಾಯನ ದೇವಸ್ಥಾನದ ಸುತ್ತಮುತ್ತ 32 ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಚಿತ್ತ ಹುಣ್ಣಿಮೆಯ ದಿನ ಈ ಕರಗ ನಡೆಯುತ್ತದೆ. ದುಂಡು ಮಲ್ಲಿಗೆಯ ಹೂಗಳಿಂದ ಕರಗ ಅಲಂಕೃತವಾಗಿರುತ್ತದೆ. ಸದ್ಯ ಕರಗಕ್ಕೂ ಮುನ್ನ ಈ ಅವಘಡ ನಡೆದಿದ್ದು, ಹಲವರು ಹಲವು ರೀತಿ ವ್ಯಾಖ್ಯಾನಿಸುತ್ತಿದ್ದಾರೆ. ಆದರೆ, ಸುಮಾರು 10 ಬೈಕ್ ಗಳು ಸುಟ್ಟು ಹೋಗಿದ್ದು, ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.