ಇಂದು ಕಾಂಗ್ರೆಸ್ ನ 2ನೇ ಪಟ್ಟಿ ಬಿಡುಗಡೆಯಾಗಿದೆ. ಆದರೆ, ಈ ಪಟ್ಟಿ ಗಮನಿಸಿದರೆ, ಕೆಲವು ಟಿಕೆಟ್ ಆಕಾಂಕ್ಷಿತರಿಗೆ ಪಕ್ಷ ಶಾಕ್ ನೀಡಿದೆ. ಅದು ಕೇವಲ ಅವರಿಗಷ್ಟೇ ಅಲ್ಲ, ಇಡೀ ರಾಜ್ಯದ ಜನರೇ ಆಶ್ಚರ್ಯ ಪಡುವಂತಾಗಿದೆ.
ಹೌದು! ಕಾಂಗ್ರೆಸ್ ಕೆಲವು ಮುಖಂಡರಿಗೆ ಟಿಕೆಟ್ ನೀಡಿಲ್ಲ. ಕಡೂರಿನ ಮಾಜಿ ಶಾಸಕ ವೈ.ಎಸ್.ವಿ ದತ್ತಾ ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ತಮ್ಮ ಅಪಾರ ಕಾರ್ಯಕರ್ತರೊಂದಿಗೆ ಕಾಂಗ್ರೆಸ್ ಸೇರಿದ್ದರು. ಒಂದು ಕಾಲದಲ್ಲಿ ಜೆಡಿಎಸ್ ನ ಪ್ರಭಾವಿ ನಾಯಕರಲ್ಲಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರ ಮಾನಸ ಪುತ್ರ ಎಂದೇ ಬಿಂಬಿತರಾಗಿದ್ದ, ದತ್ತಾ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ದೇವೇಗೌಡರು ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ದತ್ತಾ ಅವರನ್ನು ಪ್ರೀತಿಸುತ್ತಿದ್ದರು ಹಾಗೂ ಗೌರವಿಸುತ್ತಿದ್ದರು.
ಆದರೆ, ಇತ್ತೀಚೆಗೆ ದೇವೇಗೌಡ ಅವರು ರಾಜ್ಯ ರಾಜಕೀಯದಿಂದ ಸ್ವಲ್ಪ ಹಿಮ್ಮುಖರಾಗಿದ್ದರಿಂದಾಗಿ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಪಕ್ಷದಲ್ಲಿ ಪ್ರಭಲರಾಗಿದ್ದರ ಹಿನ್ನೆಲೆಯಲ್ಲಿ ದತ್ತಾ ಅವರ ವರ್ಚಸ್ಸು ಪಕ್ಷದಲ್ಲಿ ಕಡಿಮೆಯಾಗಿತ್ತು. ದತ್ತಾ ಹಾಗೂ ಕುಮಾರಸ್ವಾಮಿ ಮಧ್ಯೆ ವೈಮನಸ್ಸು ಉಂಟಾಗಿತ್ತು.
ಈ ಕಾರಣದಿಂದಾಗಿ ದತ್ತಾ ಅವರು ಜೆಡಿಎಸ್ ತೊರೆಯುವ ನಿರ್ಧಾರ ಮಾಡಿದ್ದರು.
ಇನ್ನೊಂದೆಡೆ ದತ್ತಾ, ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಅವರಿಬ್ಬರು ಆಪ್ತರು ಕೂಡ. ಏಕೆಂದರೆ ಇಬ್ಬರು ದಳದಲ್ಲಿ ಇದ್ದ ಸಂದರ್ಭದಲ್ಲಿ ದೇವೇಗೌಡ ಅವರಿಗೆ ಹೆಚ್ಚು ಆಪ್ತರಾಗಿದ್ದವರು ಹಾಗೂ ಪಕ್ಷ ಬೆಳವಣಿಗೆಯಲ್ಲಿ ಹಗಲಿರುಳು ದುಡಿದು, ಸಂಘಟನೆ ಮಾಡಿದ್ದರು.
ಹೀಗಾಗಿ ದತ್ತಾ ಅವರು ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿ ಕಾಂಗ್ರೆಸ್ ಸೇರಿದ್ದರು. ಈ ನಿಟ್ಟಿನಲ್ಲಿ ಸಹಜವಾಗಿ ಕಾಂಗ್ರೆಸ್ ಅವರಿಗೆ ಕಡೂರು ಕ್ಷೇತ್ರದ ಟಿಕೆಟ್ ನೀಡುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಕಾಂಗ್ರೆಸ್ ಮಾತ್ರ ಜನರು ಹಾಗೂ ದತ್ತಾ ಅವರ ನಿರೀಕ್ಷೆಯನ್ನು ತಲೆ ಕೆಳಗೆ ಮಾಡಿದೆ. ಕಡೂರು ಕ್ಷೇತ್ರದ ಕಾಂಗ್ರೆಸ್ ನ ಪ್ರಭಲ ಆಕಾಂಕ್ಷಿಯಾಗಿದ್ದ ದತ್ತಾಗೆ ಟಿಕೆಟ್ ನೀಡದೆ ಶಾಕ್ ನೀಡಿದೆ.
ಇನ್ನೊಂದೆಡೆ ಕುರುಬ ಸಮುದಾಯದ ಹಾಗೂ ಕಳೆದ ಬಾರಿ ಸ್ಪರ್ಧಿಸಿ ಸೋಲು ಕಂಡಿದ್ದ ಆನಂದ್ ಗೆ ಕಾಂಗ್ರೆಸ್ ಮಣೆ ಹಾಕಿದೆ. ಸಹಜವಾಗಿ ದತ್ತಾ ಹಾಗೂ ಅವರ ಕಾರ್ಯಕರ್ತರಿಗೆ ಭಾರೀ ನಿರಾಸೆಯಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಗುದ್ದಾಟದಿಂದಾಗಿ ದತ್ತಾ ಅವರು ಟಿಕೆಟ್ ಕಳೆದುಕೊಳ್ಳುವಂತಾಗಿದೆ. ಸಿದ್ದರಾಮಯ್ಯ ಅವರ ಆಪ್ತ ಎಂಬ ಕಾರಣಕ್ಕೆ ದತ್ತಾಗೆ ಟಿಕೆಟ್ ಸಿಕ್ಕಿಲ್ಲ ಎಂಬ ಆರೋಪಗಳು ಕೂಡ ಕೇಳಿ ಬರುತ್ತಿದೆ. ಆದರೆ, ದತ್ತಾಗೆ ಟಿಕೆಟ್ ನೀಡದೆ, ನೇರವಾಗಿ ವಿಧಾನ ಪರಿಷತ್ ಗೆ ಅಥವಾ ಪಕ್ಷ ಸಂಘಟನೆಯಲ್ಲಿ ಪ್ರಮುಖ ಹುದ್ದೆ ನೀಡಲು ಕಾಂಗ್ರೆಸ್ ಈ ಕುರಿತು ನಿರ್ಧಾರ ತೆಗೆದುಕೊಂಡಿರಬಹುದು ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಮುಂದಿನ ದಿನಗಳಲ್ಲಿ ಮಾತ್ರ ಸಂಪೂರ್ಣ ಸತ್ಯಾಂಶ ಹೊರ ಬೀಳಲಿದೆ, ಆದರೆ, ವೈಎಸ್.ವಿ ದತ್ತಾ ಮಾತ್ರ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.