IPL: ಪ್ರಸಕ್ತ ಸಾಲಿನ ಐಪಿಎಲ್ ನ(IPL) ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ್ದ ಆರ್ ಸಿಬಿ(RCB) ಭರ್ಜರಿ ಗೆಲುವು ದಾಖಿಲಿಸುವುದರ ಮೂಲಕ ಆತ್ಮವಿಶ್ವಾಸದಿಂದಲೇ ತನ್ನ ಅಭಿಯಾನ ಆರಂಭಿಸಿತ್ತು. ಆದರೆ, ಎರಡನೇ ಪಂದ್ಯದಲ್ಲಿ ಹೀನಾಯ ಸೋಲು ಕಂಡಿತ್ತು. ಆದರೆ, ಈಗ ಆರ್ ಸಿಬಿಗೆ ಮತ್ತೊಂದು ಶಾಕ್ ಎದುರಾಗಿದೆ.
ಆರ್‌ಸಿಬಿ ತಂಡದಿಂದ ಎಡಗೈ ವೇಗದ ಬೌಲರ್ ರೀಸ್ ಟೋಪ್ಲಿ ಹೊರ ಬಿದ್ದಿದ್ದಾರೆ. ಮುಂಬೈ ಇಂಡಿಯನ್ಸ್(Mumbai Indians) ವಿರುದ್ಧದ ಮೊದಲನೇ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ರೀಸ್ ಟೋಪ್ಲಿ ಭುಜದ ಗಾಯಕ್ಕೆ ಒಳಗಾಗಿದ್ದರು. ಭುಜದ ಮೂಳೆಗೆ ಪೆಟ್ಟಾಗಿದ್ದರಿಂದಾಗಿ ಅವರು ಮರಳಿ ಕೋಲ್ಕತ್ತಾಗೆ ತೆರಳಿದ್ದಾರೆ. ಅಲ್ಲಿಂದ ಅವರು ನೇರವಾಗಿ ಇಂಗ್ಲೆಂಡ್ ಗೆ ತೆರಳಿದ್ದು, ಆರ್ ಸಿಬಿಗೆ ಮತ್ತೊಂದು ಶಾಕ್ ಎದುರಾಗುವಂತಾಗಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ತಂಡದ ಮುಖ್ಯ ಕೋಚ್ ಸಂಜಯ್ ಬಂಗಾರ್(Sanjay Bangar), ರೀಸ್ ಟೋಪ್ಲಿ ಐಪಿಎಲ್‌ನಿಂದ ಹೊರಬಿದ್ದಿರುವುದಾಗಿ ತಿಳಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ಸಮಯದಲ್ಲಿ ಮಾತನಾಡಿದ ಸಂಜಯ್ ಬಂಗಾರ್ ರೀಸ್ ಟೋಪ್ಲಿ ಇಂಗ್ಲೆಂಡ್‌ಗೆ ಮರಳಿ ಹೋಗಿದ್ದಾರೆ. ಇದರಿಂದಾಗಿ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ ಎಂದು ಹೇಳಿದ್ದಾರೆ.
ಇಂಗ್ಲೆಂಡ್ ನ ಆರ್‌ಸಿಬಿ ಎಡಗೈ ವೇಗಿ ರೀಸ್ ಟಾಪ್ಲಿ ಗಾಯದ ಸಮಸ್ಯೆಯಿಂದಾಗಿ 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹೊರಬಿದ್ದಿರುವ ವಿಚಾರವನ್ನು ಆರ್‌ಸಿಬಿ ಹೆಡ್‌ಕೋಚ್ ಸಂಜಯ್ ಬಂಗಾರ್ ಖಚಿತಪಡಿಸಿದ್ದಾರೆ.
ದುರದೃಷ್ಟವಶಾತ್, ರೀಸ್ ಟೋಪ್ಲೆ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ನಾವು ಅವರನ್ನು ಮರಳಿ ಪಡೆಯಲು ಸಾಕಷ್ಟು ಪ್ರಯತ್ನಿಸಿದ್ದೇವೆ. ಆದರೆ ದುರದೃಷ್ಟವಶಾತ್, ಅವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ. ನಾವು ಸರಿಯಾದ ಸಮಯದಲ್ಲಿ ಬದಲಿ ಆಟಗಾರನನ್ನು ಹೆಸರಿಸುತ್ತೇವೆ ಎಂದು ಕೋಚ್ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲನೇ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ರೀಸ್ ಟೋಪ್ಲಿ ಬೌಂಡರಿ ತಡೆಯುವ ಯತ್ನದಲ್ಲಿ ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ಪಂದ್ಯದ 8ನೇ ಓವರ್ ನಲ್ಲಿ ಕರಣ್ ಶರ್ಮಾ ಬೌಲಿಂಗ್‌ನಲ್ಲಿ ತಿಲಕ್ ವರ್ಮಾ ಹೊಡೆತವನ್ನು ತಡೆಯಲು ಡೈವ್ ಮಾಡಿದ ಟೋಪ್ಲಿ ಭುಜದ ಮೇಲೆ ದೇಹದ ಭಾರ ಹಾಕಿದ ಕಾರಣ, ಗಾಯ ಮಾಡಿಕೊಂಡಿದ್ದರು. ಕೂಡಲೇ ವೈದ್ಯರು ಅವರನ್ನು ಮೈದಾನದಿಂದ ಹೊರ ಕರೆದುಕೊಂಡು ಹೋಗಿದ್ದರು.
2023ರ ಐಪಿಎಲ್‌ನಲ್ಲಿ ಆರ್ ಸಿಬಿ ತಂಡಕ್ಕೆ ಆಟಗಾರರ ಗಾಯದ ಸಮಸ್ಯೆ ಕಾಡುತ್ತಿದೆ. ಟೂರ್ನಿ ಆರಂಭಕ್ಕೆ ಮುನ್ನವೇ ವಿಲ್ ಜ್ಯಾಕ್ಸ್ ಹೊರಗುಳಿದರು. ನಂತರ ಪ್ರಮುಖ ಬ್ಯಾಟರ್ ರಜತ್ ಪಾಟಿದಾರ್ ಕೂಡ ಹಿಮ್ಮಡಿ ಗಾಯದಿಂದ ಹಿಂದೆ ಸರಿದರು. ಈಗ ಈ ಸಾಲಿಗೆ ರೀಸ್ ಟೋಪ್ಲಿ ಸೇರಿದ್ದಾರೆ. ತಂಡದ ಮತ್ತೊಬ್ಬ ವೇಗದ ಬೌಲರ್ ಜೋರ್ಶ ಹೇಜಲ್‌ವುಡ್ ಕೂಡ ಗಾಯಗೊಂಡಿದ್ದು, ಅವರು ಕೂಡ ತಂಡ ಸೇರಿಲ್ಲ. ಅವರು ಏ. 14ರಂದು ತಂಡ ಸೇರಲಿದ್ದಾರೆ ಎಂದು ಕೋಚ್ ಹೇಳಿದ್ದಾರೆ. ಜೋಶ್ ಹೇಜಲ್‌ವುಡ್ ಏಪ್ರಿಲ್ 14ರಂದು ತಂಡ ಸೇರಿದರೂ ಕೂಡಲೇ ಮೈದಾನಕ್ಕೆ ಇಳಿಯುವುದು ಅನುಮಾನ ಎನ್ನಲಾಗಿದೆ. ಏಪ್ರಿಲ್ ಕೊನೆಯ ವಾರದಲ್ಲಿ ತವರಿನಲ್ಲಿ ನಡೆಯಲಿರುವ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಹೇಜಲ್‌ವುಡ್ ಆಡುವ ಸಾಧ್ಯತೆ ಇದೆ ಎನ್ನಲಾಗಿದೆ.