ಉತ್ತರ ಕರ್ನಾಟಕದಲ್ಲಿ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ರಥೋತ್ಸವ ಜರಗುತ್ತವೆ. ಈ ಸಂದರ್ಭದಲ್ಲಿ ಜನದಟ್ಟಣೆ ಅಲ್ಲಿ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಸ್ವಲ್ಪ ಆಯ ತಪ್ಪಿದರೆ ಸಾಕು ಅವಘಡಗಳು ಸಂಭವಿಸುತ್ತವೆ. ಇದೇ ರೀತಿ ವಿಜಯಪುರ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಎರಡು ರಥೋತ್ಸವದಲ್ಲಿ ಅವಘಡ ಸಂಭವಿಸಿ ಇಬ್ಬರು ಭಕ್ತರು ಸಾವನ್ನಪ್ಪಿರುವ ಘಟನೆ ಜರುಗಿದೆ.
ರಥದ ಮೇಲಿಂದ ಬಿದ್ದು ಓವ್ರ ವ್ಯಕ್ತಿ ಸಾವನ್ನಪ್ಪಿದ್ದರೆ, ಓರ್ವ ವ್ಯಕ್ತಿ ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ. ಈ ಎರಡು ಘಟನೆಗಳು ಜಿಲ್ಲೆಯ ಬೇರೆ ಬೇರೆ ಸ್ಥಳಗಳಲ್ಲಿ ಒಂದೇ ದಿನ ಜರುಗಿವೆ.
ಸಿಂದಗಿ ತಾಲೂಕಿನ ಗೋಲಗೇರಿಯಲ್ಲಿ ಗೋಲ್ಲಾಳೇಶ್ವರ ಜಾತ್ರೆ ನಡೆದ ಸಂದರ್ಭದಲ್ಲಿ ರಥೋತ್ಸವದಲ್ಲಿನ ರಥದ ಮೇಲಿಂದ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಸುಮಾರು 70ಅಡಿ ರಥದ ಮೇಲೆ ಕಳಸವಿಟ್ಟು ಪೂಜಾ ವಿಧಿ- ವಿಧಾನಗಳು ನಡೆದು ಇನ್ನೇನು ರಥ ಮುಂದೆ ಸಾಗಬೇಕು ಎನ್ನುವಷ್ಟರಲ್ಲಿ ರಥದ ತುತ್ತ ತುದಿಯಿಂದ ವ್ಯಕ್ತಿಯೊಬ್ಬರು ಆಯ ತಪ್ಪಿ ಬಿದ್ದಿದ್ದಾರೆ. ಕೂಡಲೇ ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ದಾರಿಯ ಮಧ್ಯೆಯೇ ಸಾವನ್ನಪ್ಪಿದ್ದಾರೆ. ರಥದ ತುದಿಯಿಂದ ಬಿದ್ದ ವ್ಯಕ್ತಿಯನ್ನು ಸಾಹೇಬ ಪಟೇಲ್ ಕಾಚಾಪುರ ಎಂದು ಗುರುತಿಸಲಾಗಿದ್ದು, ಈ ವ್ಯಕ್ತಿ ದೇವರ ಪರಮ ಭಕ್ತನಾಗಿದ್ದ. ಅಲ್ಲದೇ, ಪ್ರತಿ ವರ್ಷವೂ ಕಳಶ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಆದರೆ, ಈ ವರ್ಷ ಆಯ ತಪ್ಪಿ ಬಿದ್ದು ದೇವರ ಪಾದ ಸೇರಿದ ಎಂದು ಭಕ್ತರು ಕಣ್ಣೀರು ಸುರಿಸಿದ್ದಾರೆ.
ಬಿದ್ದ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಇಂದಿನಿಂದ ಗೋಲ್ಲಾಳೇಶ್ವರ ಜಾತ್ರೆ ರಥೋತ್ಸವದೊಂದಿಗೆ ಆರಂಭಗಗೊಳ್ಳಬೇಕಾಗಿತ್ತು. ಐದು ದಿನಗಳ ನಂತರ ಕಳಸದ ಮೆರವಣಿಗೆ ಆದ ಮೇಲೆ ಜಾತ್ರೆ ಸಂಪನ್ನಗೊಳ್ಳಲಿತ್ತು. ಆದರೆ ಅಷ್ಟರೊಳಗಾಗಿ ಈ ಅವಘಡ ಸಂಭವಿಸಿದೆ. ಈ ಜಾತ್ರೆಗೆ ಮಹಾರಾಷ್ಟ್ರ, ಆಂದ್ರಪ್ರದೇಶ ಸೇರಿದಂತೆ ಲಕ್ಷಾಂತರ ಭಕ್ತರು ಸೇರುತ್ತಾರೆ. ಆದರೆ, ಈ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ ರಥೋತ್ಸವವನ್ನು ಭಕ್ತರು ಅರ್ಧಕ್ಕೆ ನಿಲ್ಲಿಸಿದ್ದಾರೆ.
ಇನ್ನೊಂದು ಘಟನೆಯಲ್ಲಿ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದಲ್ಲು ರಥೋತ್ಸವ ನಡೆಯುತ್ತಿದ್ದ ಸಂದರ್ಭದಲ್ಲಿ ಚಲಿಸುತ್ತಿದ್ದ ರಥದ ಚಕ್ರಕ್ಕೆ ಯುವಕ ಸಾವನ್ನಪ್ಪಿದ್ದಾನೆ.
ಗ್ರಾಮದ ಪವಾಡ ಬಸವೇಶ್ವರ ಜಾತ್ರೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮಹಾರಥೋತ್ಸವದಲ್ಲಿ ಅತಿ ಭಾರದ ತೇರಿನ ಚಕ್ರಗಳು ಹರಿದ ಪರಿಣಾಮ ನಾಗರಾಜ್ ಯಲ್ಲಪ್ಪ ವಣಿಕ್ಯಾಳ (25) ಎಂಬ ಯುವಕನ ಕಾಲಿಗೆ ಗಾಯಗಳಾಗಿವೆ. ಸಂಜೆ ತೇರನ್ನು ದೇವಸ್ಥಾನದಿಂದ ಪಾದಗಟ್ಟಿವರೆಗೆ ಭಕ್ತರು ಎಳೆದೊಯ್ದಿದ್ದರು. ಅಲ್ಲಿಂದ ಮರಳಿ ಕೆಳಮುಖವಾಗಿ ದೇವಸ್ಥಾನದತ್ತ ರಥ ಚಲಿಸುತ್ತಿದ್ದಾಗ ರಥದ ಮುಂಭಾಗದಲ್ಲಿ ಹಗ್ಗ ಹಿಡಿದು ಜಗ್ಗುತ್ತಿದ್ದ ವ್ಯಕ್ತಿ ನೆಲಕ್ಕೆ ಬಿದ್ದ ಕೂಡಲೇ ಆತನ ಎರಡೂ ಕಾಲುಗಳ ಮೇಲೆ ಒಂದು ಟನ್ ಭಾರದ ಕಲ್ಲಿನ ಚಕ್ರಗಳು ಹರಿದು ಹೋಗಿವೆ. ಕೂಡಲೇ ಭಕ್ತರು ರಥ ನಿಲ್ಲಿಸಿದ್ದಾರೆ. ಆಗ ಆತನನ್ನು ಮುದ್ದೇಬಿಹಾಳದಲ್ಲಿರುವ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಿದ್ದಾರೆ.
ಯುವಕನ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಯುವಕನನ್ನ ಬಾಗಲಕೋಟೆ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ. ಕಾಲಿನ ಎಲುಬುಗಳು ಪುಡಿಪುಡಿಯಾಗಿವೆ ಎನ್ನಲಾಗಿದೆ. ಈ ಎರಡು ಪ್ರತ್ಯೇಕ ಘಟನೆಗಳಿಂದ ಇಡೀ ವಿಜಯಪುರ ಜಿಲ್ಲೆಯ ಜನರು ಆತಂಕದಲ್ಲಿದ್ದಾರೆ.