Bangalore : ಕನ್ನಡದ ಆಸ್ತಿ ನಂದಿನಿ(Nandini) ಮುಗಿಸಲು ಈಗ 3ನೇ ಸಂಚು ನಡೆಯುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ(HD Kumaraswamy) ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಅವರು, ಅಮುಲ್(Amul) ಜತೆ ವಿಲೀನ ಮಾಡುವುದು ಮೊದಲನೇ ಸಂಚು. ಮೊಸರಿನ(Curd) ಮೇಲೆ ಹಿಂದಿಯ ‘ದಹಿ’ ಪದ ಮುದ್ರಣ ಮಾಡಲು ಯತ್ನಿಸಿ, ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎರಡನೇ ಸಂಚು ವಿಫಲವಾಯಿತು. 3ನೇ ಸಂಚನ್ನು ಸಫಲಗೊಳಿಸಲು ಕೇಂದ್ರ ಸರ್ಕಾರ ಅಮುಲ್ ಅನ್ನು ಮುಂದಿಟ್ಟುಕೊಂಡಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ತನ್ನ ಏಕೈಕ ಪ್ರತಿಸ್ಪರ್ಧಿ ನಂದಿನಿಗೆ ಕರ್ನಾಟಕದಲ್ಲಿಯೇ ಅಡ್ಡಿ ಮಾಡಬೇಕೆನ್ನುವುದು ಅಮುಲ್ ನ ದುರಾಲೋಚನೆಯಾಗಿದೆ. ಒಂದು ದೇಶ, ಒಂದು ಅಮುಲ್, ಒಂದೇ ಹಾಲು, ಒಂದೇ ಗುಜರಾತ್ʼ(Gujarat) ಎನ್ನುವುದು ಕೇಂದ್ರ ಸರ್ಕಾರದ ಅಧಿಕೃತ ನೀತಿಯಂತಾಗಿ ಬಿಟ್ಟಿದೆ ಎಂದು ಆರೋಪಿಸಿದ್ದಾರೆ.
ಹಿಂದಿ ಹೇರಿಕೆಗೆ ಕನ್ನಡಿಗರು ಪ್ರಬಲ ಪ್ರತಿರೋಧ ಒಡ್ಡುತ್ತಿರುವುದರಿಂದ ಕೆಎಂಎಫ್‌ನ ಕಥೆ ಮುಗಿಸಲೇಬೇಕು ಎಂದು ಅಮುಲ್ ಪಣ ತೊಟ್ಟಂತಿದೆ ಎಂದಿದ್ದಾರೆ ಕೆಎಂಎಫ್ ಜತೆ ಅಮುಲ್ ಅನಗತ್ಯ ಸ್ಪರ್ಧೆ ನಡೆಸಿ ದಿನದಿಂದ ದಿನಕ್ಕೆ ನಂದಿನಿಯನ್ನು ತುಳಿಯುವ ಹುನ್ನಾರ ಇದಾಗಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ(Bjp) ಡಬಲ್ ಎಂಜಿನ್ ಸರ್ಕಾರ, ನಮ್ಮ ರಾಜ್ಯದ ಹಾಲು ಉತ್ಪಾದಕರನ್ನು ಬೀದಿಗೆ ತಳ್ಳಿ ಗುಜರಾತಿಗಳ ಗುಲಾಮರನ್ನಾಗಿ ಮಾಡುವ ಹುನ್ನಾರ ನಡೆಸಿರುವುದು ಇದರಿಂದ ಸ್ಪಷ್ಟವಾಗುತ್ತಿದೆ. ಇಷ್ಟೆಲ್ಲ ಆದರೂ ರಾಜ್ಯ ಸರ್ಕಾರದ ದಿವ್ಯಮೌನ, ಕೆಎಂಎಫ್ ನಿಷ್ಕ್ರಿಯತೆ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ, ಎಚ್‌ಡಿ ರೇವಣ್ಣ ಕೆಎಂಎಫ್ ಅಧ್ಯಕ್ಷರಾಗಿದ್ದಾಗ ಯಲಹಂಕ ಮದರ್ ಡೈರಿಯಲ್ಲಿ ವಿಶೇಷ ಐಸ್ ಕ್ರೀಮ್ ಘಟಕ ಸ್ಥಾಪಿಸಿದ್ದರು. ಈ ಘಟಕದಿಂದ ದಶಕಗಳಿಂದ ನಿತ್ಯವೂ ಕೆಎಂಎಫ್ ದೊಡ್ಡ ಪ್ರಮಾಣದಲ್ಲಿ ಅಮುಲ್ ಬ್ರ್ಯಾಂಡ್‌ನ ಐಸ್‌ಕ್ರೀಮ್ ತಯಾರಿಸಿ ಈಗಲೂ ವಿತರಿಸುತ್ತಿದೆ. ಆದರೆ, ಇವರು ಕೆಎಂಎಫ್‌ಗೆ ದೊಡ್ಡ ಖೆಡ್ಡಾ ತೋಡಲು ಅಮುಲ್ ಹೊರಟಿದೆ ಎಂದು ಆರೋಪಿಸಿದ್ದಾರೆ.
ಕನ್ನಡಿಗರಾದ ನಾವು ತಕ್ಷಣ ಎಚ್ಚೆತ್ತು ನಂದಿನಿಯನ್ನೇ ಅವಲಂಬಿಸಿರುವ ರಾಜ್ಯದ ರೈತರ ಹಿತವನ್ನು ಆದ್ಯತೆಯಲ್ಲಿ ರಕ್ಷಿಸಿ ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.