Kornersite

Just In Sports

IPL 2023: ಕೊನೆಯ ಓವರ್ ನಲ್ಲಿ ಸಿಕ್ಸರ್ ಸುರಿಮಳೆಗೈದು ಗೆಲುವಿನ ದಡ ಸೇರಿಸಿದ ರಿಂಕು!

IPL 202 GT VS KKR : ಕೊನೆಯ ಓವರ್‌ ನಲ್ಲಿ ರಿಂಕು ಸಿಂಗ್‌ ಆರ್ಭಟಕ್ಕೆ ಗುಜರಾತ್ ಟೈಟಾನ್ಸ್ ವಿರೋಚಿತ ಸೋಲು ಕಾಣುವಂತಾಗಿದೆ.
ರಿಂಕು ಸಿಂಗ್ 5 ಭರ್ಜರಿ ಸಿಕ್ಸರ್‌ ನೆರವಿನಿಂದ ಕೋಲ್ಕತ್ತಾ ನೈಟ್‌ರೈಡರ್ಸ್‌, ಹಾಲಿ ಚಾಂಪಿಯನ್ಸ್‌ ಗುಜರಾತ್‌ ಜೈಂಟ್ಸ್‌ ಗೆ ಮೂರು ವಿಕೆಟ್ ಗಳ ಸೋಲಿನ ರುಚಿ ತೋರಿಸಿದೆ. ಕೆಕೆಆರ್ ಗೆ ಕೊನೆಯ ಓವರ್‌ ನಲ್ಲಿ 29 ರನ್‌ ಗಳ ಅಗತ್ಯವಿತ್ತು. ಈ ಸಂದರ್ಭದಲ್ಲಿ ಕ್ರೀಸ್‌ ನಲ್ಲಿದ್ದ ಉಮೇಶ್‌ ಯಾದವ್‌ ಮೊದಲ ಎಸೆತದಲ್ಲಿ 1 ರನ್‌ ಪಡೆದರು. ನಂತರ ಕ್ರೀಸ್‌ಗೆ ಬಂದ ರಿಂಕು ಸಿಂಗ್‌ ಸತತ 5 ಎಸೆತಗಳನ್ನೂ ಭರ್ಜರಿ ಸಿಕ್ಸರ್‌ ಆಗಿ ಪರಿವರ್ತಿಸಿ ತಂಡಕ್ಕೆ ಗೆಲುವಿನ ಸಿಂಚನ ನೀಡಿದರು.

ಈ ಮೂಲಕ ಗೆಲುವಿನ ಹಾದಿಯಲ್ಲಿದ್ದ ಹಾಲಿ ಚಾಂಪಿಯನ್ಸ್‌ ಪಡೆಗೆ ಸೋಲುಣಿಸಿ ಕೆಕೆಆರ್‌ ತಂಡ ಸತತ 2ನೇ ಗೆಲುವು ದಾಖಲಿಸಿತು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಜೈಂಟ್ಸ್‌ ತಂಡ ಸಾಯಿ ಸುದರ್ಶನ್ ಹಾಗೂ ವಿಜಯ್ ಶಂಕರ್ ಅಮೋಘ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 204 ರನ್‌ ಗಳ ಬೃಹತ್ ಮೊತ್ತ ಗಳಿಸಿತು. 205 ರನ್‌ ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಕೆಕೆಆರ್‌ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 207 ರನ್‌ ಗಳಿಸಿ ರೋಚಕ ಜಯ ಸಾಧಿಸಿತು.

ಬೃಹತ್ ರನ್ ಬೆನ್ನಟ್ಟಿದ ಕೆಕೆಆರ್‌ ಗೆ ಉತ್ತಮ ಶುಭಾರಂಭ ಸಿಗಲಿಲ್ಲ. 2 ವಿಕೆಟ್ ಬೇಗನೆ ಉರುಳಿದವು. 3ನೇ ವಿಕೆಟ್‌ಗೆ ಜೊತೆಯಾದ ವೆಂಕಟೇಶ್‌ ಅಯ್ಯರ್‌, ನಾಯಕ ನಿತೀಶ್‌ ರಾಣ ಭರ್ಜರಿ ಬ್ಯಾಟಿಂಗ್‌ ನಡೆಸಿದರು. 3ನೇ ವಿಕೆಟ್‌ ಪತನಕ್ಕೆ ಈ ಜೋಡಿ 55 ಎಸೆತಗಳಲ್ಲಿ 100 ರನ್‌ ಕಲೆಹಾಕಿತ್ತು. ಇದರಿಂದ ತಂಡದಲ್ಲಿ ಗೆಲುವಿನ ಆಸೆ ಚಿಗುರೊಡೆದಿತ್ತು. ಆ ಸಂದರ್ಭದಲ್ಲಿ ನಿತೀಶ್‌ ರಾಣ 29 ಎಸೆತಗಳಲ್ಲಿ ಭರ್ಜರಿ 45 ರನ್‌ (4 ಬೌಂಡರಿ, 3 ಸಿಕ್ಸರ್‌) ಗಳಿಸಿ ಔಟಾದರು. ಇನ್ನೂ 207.50 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿ ಏಕಾಂಗಿ ಹೋರಾಟ ನಡೆಸಿದ ವೆಂಕಟೇಶ್‌ ಅಯ್ಯರ್‌ 40 ಎಸೆತಗಳಲ್ಲಿ ಬರೋಬ್ಬರಿ 83 ರನ್‌ (5 ಸಿಕ್ಸರ್‌, 8 ಬೌಂಡರಿ) ಬಾರಿಸಿ ವಿಕೆಟ್‌ ಒಪ್ಪಿಸಿದರು.

ಇದರ ಬೆನ್ನಲ್ಲಿಯೇ ಆಂಡ್ರೆ ರಸ್ಸೆಲ್‌, ಸುನೀಲ್‌ ನರೇನ್‌, ಶಾರ್ದೂಲ್‌ ಠಾಕೂರ್‌ ರಶೀದ್‌ ಖಾನ್‌ ಸ್ಪಿನ್‌ ದಾಳಿಗೆ ಬಲಿಯಾಗಿ, ರಶೀದ್ ಹ್ಯಾಟ್ರಿಕ್ ವಿಕೆಟ್ ಪಡೆಯುವ ದಾಖಲೆ ಬರೆಯುವಂತೆ ಮಾಡಿದರು. ಆದರೆ ಕ್ರೀಸ್‌ನಲ್ಲಿದ್ದ ರಿಂಕು ಸಿಂಗ್‌ ಕೊನೆಯ ಓವರ್‌ನಲ್ಲಿ ಭರ್ಜರಿ 5 ಸಿಕ್ಸರ್‌ ಸಿಡಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. 228.57 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ರಿಂಕು ಸಿಂಗ್‌ 21 ಎಸೆತಗಳಲ್ಲಿ 48 ರನ್‌ (6 ಸಿಕ್ಸರ್‌, 1 ಬೌಂಡರಿ) ಬಾರಿಸಿದರೆ, ಉಮೇಶ್‌ ಯಾದವ್‌ 5 ರನ್‌ ಗಳಿಸಿ ಅಜೇಯರಾಗುಳಿದರು.

ಗುಜರಾತ್‌ ಜೈಂಟ್ಸ್ ಪರ ರಶೀದ್‌ ಖಾನ್‌ 4 ಓವರ್‌ಗಳಲ್ಲಿ 37 ರನ್‌ ನೀಡಿ 3 ಪ್ರಮುಖ ವಿಕೆಟ್‌ ಕಿತ್ತರೆ, ಅಲ್ಝರಿ ಜೋಸೆಫ್‌ 2 ವಿಕೆಟ್‌ ಹಾಗೂ, ಮೊಹಮ್ಮದ್‌ ಶಮಿ, ಜಾಸ್‌ ಲಿಟಲ್‌ ತಲಾ ಒಂದು ವಿಕೆಟ್‌ ಕಬಳಿಸಿ ಮಿಂಚಿದರು.
ಕೊಲ್ಕತ್ತಾ ನೈಟ್ ರೈಡರ್ಸ್ ಪರ ಸುನಿಲ್ ನರೇನ್‌ 3 ವಿಕೆಟ್ ಕಿತ್ತರೆ, ಸುಯಶ್ ಶರ್ಮಾ ಒಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

You may also like

Sports

ಡಿವೈನ್ ಭರ್ಜರಿ ಆಟಕ್ಕೆ ಮಂಕಾದ ಜೈಂಟ್ಸ್!

ಮುಂಬಯಿ : ಆಲ್‌ ರೌಂಡರ್‌ ಸೋಫಿ ಡಿವೈನ್‌ ಭರ್ಜರಿ ಆಟಕ್ಕೆ ಗುಜರಾತ್ ಜೈಂಟ್ಸ್ ತಂಡವು ಸೋಲು ಒಪ್ಪಿಕೊಳ್ಳುವಂತಾಯಿತು.ಗುಜರಾತ್‌ ಜೈಂಟ್ಸ್‌ ವಿರುದ್ಧ ಆರ್ ಸಿಬಿ 8 ವಿಕೆಟ್‌ ಗಳ
Sports

ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ!

ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಹಾಗೂ ಆಲ್ ರೌಂಡರ್ ಆಟಗಾರ ಸಲೀಂ ದುರಾನಿ ವಯೋಸಹಜ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ.1960ರ ದಶಕದಲ್ಲಿ ಭಾರತದ ಆಲ್ ರೌಂಡರ್