Chikkamagaluru : ಕಡೂರು (Kadur) ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವೈ.ಎಸ್.ವಿ ದತ್ತಾ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಆದರೆ, ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಿಲ್ಲ. ಎರಡನೇ ಪಟ್ಟಿಯಲ್ಲಿ ಕಡೂರ ಕ್ಷೇತ್ರದ ಅಭ್ಯರ್ಥಿಯನ್ನು ಕಾಂಗ್ರೆಸ್ ಘೋಷಿಸಿತ್ತು. ಆದರೆ, ಅದರಲ್ಲಿ ವೈ.ಎಸ್.ವಿ. ದತ್ತಾ ಹೆಸರಿರಲಿಲ್ಲ. ಹೀಗಾಗಿ ದತ್ತಾ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಸ್ವತಂತ್ರವಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ.
ಈಗ ಜೆಡಿಎಸ್ ಹಾಗೂ ಕಾಂಗ್ರೆಸ್ ಇಲ್ಲದಿರುವ ಹಿನ್ನೆಲೆಯಲ್ಲಿ ದತ್ತ (YSV Datta) ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸುಳಿವು ನೀಡಿದ್ದಾರೆ. ಭಾನುವಾರ ನಡೆದ ಸ್ವಾಭಿಮಾನದ ಸಭೆಯಲ್ಲಿ, ಕಡೂರು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ವೈಎಸ್‌ವಿ ದತ್ತ ಅವರಿಗೆ ಬೆಂಬಲಿಗರು ಒತ್ತಾಯಿಸಿದರು. ಬೆಂಬಲಿಗರ ಒತ್ತಾಯಕ್ಕೆ ದತ್ತ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೇ ಚುನಾವಣೆಯಲ್ಲಿ ಸ್ಪರ್ಧೆ ಖರ್ಚಿಗಾಗಿ ಟವೆಲ್ ಹಿಡಿದು ಸಭೆಯಲ್ಲಿ ಜನರಿಂದ ಭಿಕ್ಷೆ ಕೂಡ ಬೇಡಿದ್ದಾರೆ.
ಅಭಿಮಾನಿಗಳು 50 ಸಾವಿರ, ಲಕ್ಷ ಹಾಗೂ 2 ಲಕ್ಷ ರೂ. ಹೀಗೆ ಹಣ ಮತ್ತು ಚೆಕ್ ಕೂಡ ನೀಡಿದ್ದಾರೆ. ಮತ್ತಷ್ಟು ಹಣ ಕೊಡುವುದಾಗಿಯೂ ಭರವಸೆ ನೀಡಿದ್ದಾರೆ. ಅಭಿಮಾನಿಗಳ ಬೆಂಬಲಕ್ಕಾಗಿ ಈ ಬಾರಿ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸುಳಿವನ್ನು ದತ್ತ ನೀಡಿದ್ದಾರೆ.
ಜೆಡಿಎಸ್ ತೊರೆದು ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದ ವೈ.ಎಸ್.ವಿ ದತ್ತ ಅವರು ಕಡೂರು ಕ್ಷೇತ್ರ ಟಿಕೆಟ್ ಪ್ರಭಲ ಆಕಾಂಕ್ಷಿಯಾಗಿದ್ದರು. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗಿನ ಒಳ ಮುನಿಸಿನಿಂದ ಟಿಕೆಟ್ ಕೈತಪ್ಪಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಸೇರುವಾಗ ಬೇಷರತ್ತಾಗಿ ಪಕ್ಷ ಸೇರುತ್ತಿದ್ದೇನೆ ಎಂದು ದತ್ತ ಹೇಳಿದ್ದರು. ಆದರೆ ಟಿಕೆಟ್ ಗಿಟ್ಟಿಸಲು ಒಳಗೊಳಗೆ ಸಾಕಷ್ಟು ಪ್ರಯತ್ನವನ್ನು ಕೂಡ ಅವರು ನಡೆಸಿದ್ದರು. ಆದರೆ, ಕೊನೆ ಘಳಿಗೆಯಲ್ಲಿ ಹೈಕಮಾಂಡ್ ಅವರಿಗೆ ಟಿಕೆಟ್ ನೀಡಿಲ್ಲ. ಹೀಗಾಗಿ ಬೆಂಬಲಿಗರ ಸಭೆ ನಡೆಸಿ, ಪಕ್ಷೇತರರಾಗಿ ಕಣಕ್ಕೆ ಇಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.