Beijing : ವ್ಯಕ್ತಿಯೊಬ್ಬ ತನ್ನ ನೆರೆ ಮನೆಯವನ (Neighbour) ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕಾಗಿ 1,100 ಕೋಳಿಗಳನ್ನು ಕೊಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಜೈಲು (Jail) ಶಿಕ್ಷೆ ವಿಧಿಸಿರುವ ಘಟನೆ ಚೀನಾದಲ್ಲಿ (China) ನಡೆದಿದೆ.
ಗು ಎಂಬ ವ್ಯಕ್ತಿಗೆ ಸಂಬಂಧಿಸಿದ್ದ ಮರಗಳನ್ನು ನೆರೆಮನೆಯ ಝಾಂಗ್ ಎಂಬಾತ ಅನುಮತಿ ಇಲ್ಲದೆ, ಕತ್ತರಿಸಿದ್ದ. ಈ ಹಿನ್ನೆಲೆಯಲ್ಲಿ ಕೋಪಗೊಂಡ ಗು, ತನ್ನ ನೆರೆಮನೆಯ ಝಾಂಗ್ನ ಕೋಳಿ ಫಾರ್ಮ್ಗೆ ದಾಳಿ ಮಾಡಿದ್ದ. ಅಲ್ಲಿ ಬ್ಯಾಟರಿ ದೀಪಗಳನ್ನು ಬಳಸಿ ಕೋಳಿಗಳನ್ನು ಭಯಭೀತಗೊಳಿಸಿದ್ದ. ಹೀಗಾಗಿ ಅಲ್ಲಿದ್ದ 460 ಕೋಳಿಗಳು ಭಯದಿಂದ ಸಾವನ್ನಪ್ಪಿದ್ದವು.
ಘಟನೆಯ ನಂತರ ಪೊಲೀಸರು ಗುನನ್ನು ಬಂಧಿಸಿದ್ದಾರೆ. ಅಲ್ಲದೇ 3 ಸಾವಿರ ಯುವಾನ್ (35,734 ರೂ.)ಯನ್ನು ದಂಡವಾಗಿ ಪಾವತಿಸಲು ಸೂಚಿಸಲಾಯಿತು. ಇದರಿಂದ ಸಿಟ್ಟಿಗೆದ್ದ ಗೂ, ಝಾಂಗ್ ವಿರುದ್ಧ ಸೇಡು ತೀರಿಸಿಕೊಳ್ಳಲು ಯೋಚಿಸಿದ್ದಾನೆ. ಅದರಂತೆ ಆತ ಮತ್ತೆ 2ನೇ ಬಾರಿಗೆ ಕೋಳಿ ಫಾರ್ಮ್ ಗೆ ತೆರಳಿ ಅಲ್ಲಿದ್ದ 640 ಕೋಳಿಗಳನ್ನು ಕೊಲೆ ಮಾಡಿದ್ದಾನೆ.
ಹೀಗೆ ಒಟ್ಟು 1,100 ಕೋಳಿಗಳನ್ನು ಆತ ಕೊಲೆ ಮಾಡಿದ್ದಾನೆ. ಅವೆಲ್ಲವೂ ಸುಮಾರು 13,840 ಯುವಾನ್ (ರೂ. 1,64,855) ಮೌಲ್ಯದ್ದಾಗಿವೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಘಟನೆಗೆ ಸಂಬಂಧಿಸಿ ಮಧ್ಯ ಚೀನಾದ ಹುನಾನ್ ಪ್ರಾಂತ್ಯದ ಹೆಂಗ್ಯಾಂಗ್ ಕೌಂಟಿಯ ನ್ಯಾಯಾಲಯವು ಗೂಗೆ 6 ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಿದೆ.