ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರ ನಿವೃತ್ತಿ ನನಗೆ ದಿಗ್ಭ್ರಮೆ ತಂದಿದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪಕ್ಷ ಕಟ್ಟುವಲ್ಲಿ ಯಡಿಯೂರಪ್ಪ ಅವರ ಜೊತೆ ಈಶ್ವರಪ್ಪ ಅವರ ಪಾತ್ರ ಬಹುದೊಡ್ಡದಿದೆ. ಈಶ್ವರಪ್ಪ ಅವರು ಸಚಿವರಾಗಿ, ಉಪಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ. ಬಸವಣ್ಣನವರ ತತ್ವಗಳ ಆದಾರದ ಮೇಲೆ ಸಾಮಾಜಿಕ ನ್ಯಾಯ ನೀಡಿದ್ದಾರೆ. ಅವರು ರಾಜಕೀಯ ನಿವೃತ್ತಿ ತೆಗೆದುಕೊಳ್ಳಬಾರದಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ನಾಯಕರು ಅವರ ರಾಜೀನಾಮೆ ಪತ್ರ ಅಂಗೀಕಾರ ಮಾಡಬಾರದು. ಮತ್ತೆ ಅವರು ಶಿವಮೊಗ್ಗದಿಂದ ಸ್ಪರ್ಧೆ ಮಾಡಬೇಕು. ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿರುವುದು ನೋವು ತಂದಿದೆ. ನಾನು ಅವರೊಂದಿಗೆ ಕರೆ ಮಾಡಿ ಅವರ ಮನಸ್ಸು ಬದಲಾಯಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.