Hubballi : ಹೈಕಮಾಂಡ್ ಸೂಚನೆಯನ್ನು ಧಿಕ್ಕರಿಸಿರುವ ಜಗದೀಶ ಶೆಟ್ಟರ್ (Jagadish Shettar) ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ, ಇದಕ್ಕೆ ಸ್ವತಃ ಶೆಟ್ಟರ್ ಸ್ಪಷ್ಟನೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅದು ನನ್ನ ರಾಜೀನಾಮೆ (Resignation) ಪತ್ರ ಅಲ್ಲ. ಅದು ಸುಳ್ಳು ಪತ್ರ. ನಾನು ಯಾವುದೇ ರಾಜೀನಾಮೆ ನೀಡಿಲ್ಲ. ನಾನು ರಾಜೀನಾಮೆ ಪತ್ರ ಬರೆದಿಲ್ಲ, ಅದರ ಬಗ್ಗೆ ಯಾವುದೇ ಚಿಂತನೆ ಸಹ ಮಾಡಿಲ್ಲ. ರಾಜೀನಾಮೆ ಲೆಟರ್ ಇಂಗ್ಲಿಷ್ ನಲ್ಲಿ ಬರೆಯುತ್ತಾರೆ. ಅದು ಕನ್ನಡದಲ್ಲಿದೆ ಎಂದರೆ ನೀವೇ ಅರ್ಥ ಮಾಡಿಕೊಳ್ಳಿ. ಇಂತಹ ನೂರಾರು ಫೇಕ್ (Fake) ಪತ್ರ ಬರುತ್ತಿರುತ್ತವೆ. ಹೀಗಾಗಿ ಯಾವುದೇ ದೂರು ನೀಡುವುದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಜಗದೀಶ್ ಶೆಟ್ಟರ್ ರಾಜೀನಾಮೆ ಸಲ್ಲಿಸಿದ್ದಾರೆ. ಈ ಕುರಿತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (J.P.Nadda) ಅವರಿಗೆ ಪತ್ರ ಬರೆದಿರುವ ಅವರು, ಪ್ರಸ್ತುತ ನಡೆಯುತ್ತಿರುವ ಹಲವಾರು ಬೆಳವಣಿಗೆಗಳಿಂದ ನನ್ನ ಮನಸ್ಸಿಗೆ ತೀವ್ರ ನೋವಾಗಿದೆ. ಬಿಜೆಪಿ (BJP) ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ.

ಕಳೆದ ನಾಲ್ಕು ದಶಕಗಳಿಂದ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಒಬ್ಬ ಸಾಮಾನ್ಯ ಕಾರ್ಯಕರ್ತನಿಂದ ಮುಖ್ಯಮಂತ್ರಿವರೆಗೆ ನನ್ನ ಪ್ರಾಮಾಣಿಕ ಶ್ರಮದ ಬಗ್ಗೆ ತೃಪ್ತಿ ಇದೆ ಎಂದು ಬರೆಯಲಾಗಿದೆ. ಶೆಟ್ಟರ್ ಸ್ಪಷ್ಟನೆ ನೀಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

