NewDelhi : ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ (Hubballi-Dharwad Central) ಟಿಕೆಟ್ ವಿಚಾರವಾಗಿ ಬಿಜೆಪಿ ಹೈಕಮಾಂಡ್ ಮಾಜಿ ಸಿಎಂ ಜಗದೀಶ ಶೆಟ್ಟರ್ (Jagdish Shettar) ಅವರನ್ನು ದೆಹಲಿಗೆ ಬರುವಂತೆ ಹೇಳಿತ್ತು. ಅದೇ ರೀತಿ, ಹೈಕಮಾಂಡ್ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಭೇಟಿಯ ಬಳಿಕ ಮಾತನಾಡಿದ ಜಗದೀಶ ಶೆಟ್ಟರ್, ನನ್ನ ಮನಸ್ಸಿನಲ್ಲಿದ್ದ ಎಲ್ಲ ಭಾವನೆಗಳನ್ನು ಜೆಪಿ ನಡ್ಡಾ(JP Nadda) ಅವರೊಂದಿಗೆ ಹಂಚಿಕೊಂಡಿದ್ದೇನೆ. ಕಳೆದ ಬಾರಿಯೂ ಸ್ಪರ್ಧಿಸಿದ್ದೇನೆ. ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಸ್ಪರ್ಧೆ ಇಂಗಿತ ವ್ಯಕ್ತಪಡಿಸಿದ್ದೇನೆ. ನನ್ನ ಭಾವನೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಆಲಿಸಿದ್ದಾರೆ. ಹಿರಿಯರ ಜೊತೆ ಚರ್ಚಿಸಿ ಅಭಿಪ್ರಾಯ ತಿಳಿಸುವುದಾಗಿ ಹೇಳಿದ್ದಾರೆ ಎಂದು ಹೇಳಿದ್ದಾರೆ.

ಅಕ್ಕಪಕ್ಕದ ಜಿಲ್ಲೆಗಳ ಪರಿಸ್ಥಿತಿಯನ್ನು ತಿಳಿಸಿದ್ದೇನೆ. ಎಲ್ಲವನ್ನು ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ. ಚರ್ಚೆ ಮಾಡಿ ನಿರ್ಣಯಕ್ಕೆ ಬರಬೇಕಾಗುತ್ತದೆ ಎಂದು ಹೇಳಿದ್ದಾರೆ. ಒಂದಷ್ಟು ವಿಚಾರಗಳನ್ನು ನಾವು ಕೂಡ ಅವರಿಗೆ ಹೇಳಬೇಕಾಗುತ್ತದೆ. ಅವರು ತೆಗೆದುಕೊಳ್ಳುವ ನಿರ್ಧಾರದಂತೆ ನಡೆದುಕೊಳ್ಳುತ್ತೇನೆ ಎಂದರು.

ಜೆಪಿ ನಡ್ಡಾ ಅವರ ಜೊತೆ ಆಹ್ಲಾದಕರವಾದ ಚರ್ಚೆ ನಡೆದಿದೆ. ಮತ್ತೆ ನಾನು ಯಾರನ್ನೂ ಭೇಟಿಯಾಗುವುದಿಲ್ಲ. ಇನ್ನೊಂದು ಎರಡು ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ. ಎಲ್ಲಿಯೂ ನಾನು ಸಿಟ್ಟು ಮಾಡಿಕೊಂಡಿಲ್ಲ. ಟಿಕೆಟ್ ಕೊಡುತ್ತಾರೋ ಬಿಡುತ್ತಾರೋ ಅದನ್ನು ನಾನು ಹೇಳುವುದಿಲ್ಲ. ಇವತ್ತಿನ ಭೇಟಿಯಿಂದ ನನಗೆ ಸಮಾಧಾನವಾಗಿದೆ. ಇವತ್ತು ಮಧ್ಯರಾತ್ರಿ ಬೆಂಗಳೂರಿಗೆ ತೆರಳುತ್ತಿದ್ದೇನೆ ಎಂದು ಹೇಳಿದ್ದಾರೆ.

ದೆಹಲಿಗೆ ತೆರಳುವ ಮುನ್ನ ಮಾತನಾಡಿದ್ದ ಶೆಟ್ಟರ್, ಮಂತ್ರಿ ಸ್ಥಾನ ಸಿಗದಿದ್ದರೂ 2 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಕೆಲಸ ಮಾಡುವುದಕ್ಕೆ ಮಂತ್ರಿ ಸ್ಥಾನವೇ ಬೇಕು ಅಂತೇನಿಲ್ಲ. ನನಗೆ ಯಾವುದೇ ಸ್ಥಾನಮಾನ ನೀಡದಿದ್ದರೂ ಕೆಲಸ ಮಾಡಿದ್ದೇನೆ. ರಾಷ್ಟ್ರೀಯ ನಾಯಕರಿಂದ ಪಾಸಿಟಿವ್ ರೆಸ್ಪಾನ್ಸ್ ಬರಬಹುದು ಎಂದು ಹೇಳಿದ್ದರು.