ಭಾರತದಲ್ಲಿ ಆರಂಭವಾಗಿರುವ ಐಪಿಎಲ್ ಟೂರ್ನಿಯಲ್ಲ ಇಲ್ಲಿಯವರೆಗೆ ಒಟ್ಟು 14 ತಂಡಗಳು ಕಾದಾಡಿವೆ. ಈ ಎಲ್ಲ ತಂಡಗಳ ಪೈಕಿ ಒಟ್ಟು 13 ತಂಡಗಳ ವಿರುದ್ಧ ಅರ್ಧಶತಕ ಬಾರಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.

ಕೊಹ್ಲಿ ಹೊರತು ಪಡಿಸಿದರೆ, ಬೇರೆ ಯಾವುದೇ ಆಟಗಾರ, ಇಷ್ಟೊಂದು ತಂಡಗಳ ವಿರುದ್ಧ ಕನಿಷ್ಠ ಅರ್ಧ ಶತಕದ ಸಾಧನೆ ಮಾಡಿಲ್ಲ.
ವಿರಾಟ್ ಕೊಹ್ಲಿ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಇಲ್ಲಿಯವರೆಗೆ 9 ಬಾರಿ 50+ ಗೂ ಅಧಿಕ ರನ್ ಗಳಿಸಿದ್ದಾರೆ. 2008 ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಹೆಸರಿನಲ್ಲಿದ್ದ ಡೆಲ್ಲಿ ಫ್ರಾಂಚೈಸಿಯು ಆ ನಂತರ ಡೆಲ್ಲಿ ಕ್ಯಾಪಿಟಲ್ಸ್ ಎಂದು ಹೆಸರು ಬದಲಾಯಿಸಿತು. ಈ 2 ತಂಡಗಳ ವಿರುದ್ಧ ಕೊಹ್ಲಿ ಅರ್ಧಶತಕ ಬಾರಿಸಿದ್ದಾರೆ. ಅಲ್ಲದೆ ಡೆಲ್ಲಿ ಫ್ರಾಂಚೈಸಿ ವಿರುದ್ಧ ಇದುವರೆಗೆ 8 ಬಾರಿ 50 ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ.

ಐಪಿಎಲ್ ಆರಂಭದಿಂದಲೂ ಕಣದಲ್ಲಿರುವ ಕೆಕೆಆರ್ ವಿರುದ್ಧ ವಿರಾಟ್ ಕೊಹ್ಲಿ ಇಲ್ಲಿಯವರೆಗೆ 5 ಬಾರಿ 50+ ಗಿಂತ ಹೆಚ್ಚಿನ ರನ್ ಕಲೆ ಹಾಕಿದ್ದಾರೆ. 2008 ರಿಂದ ಐಪಿಎಲ್ ಕಣದಲ್ಲಿರುವ ಮುಂಬೈ ಇಂಡಿಯನ್ಸ್ ವಿರುದ್ಧ ಕಿಂಗ್ ಕೊಹ್ಲಿ 5 ಬಾರಿ ಅರ್ಧಶತಕ ಸಿಡಿಸಿದ್ದಾರೆ. ಎಸ್ಆರ್ಹೆಚ್ ವಿರುದ್ಧ ವಿರಾಟ್ ಕೊಹ್ಲಿ ಇದುವರೆಗೆ 4 ಬಾರಿ 50+ ಸ್ಕೋರ್ಗಳಿಸಿದ್ದಾರೆ.

2008 ರಿಂದ ಐಪಿಎಲ್ನಲ್ಲಿ ಇರುವ ರಾಜಸ್ಥಾನ್ ರಾಯಲ್ಸ್ ವಿರುದ್ಧ ವಿರಾಟ್ ಕೊಹ್ಲಿ ಇದುವರೆಗೆ 4 ಬಾರಿ 50ಕ್ಕಿಂತ ಹೆಚ್ಚು ರನ್ ಕಲೆ ಹಾಕಿದ್ದಾರೆ. ಐಪಿಎಲ್ ಆರಂಭದಲ್ಲಿ ಡೆಕ್ಕನ್ ಚಾರ್ಜರ್ಸ್ ಹೆಸರಿನಲ್ಲಿ ಕಣಕ್ಕಿಳಿದಿದ್ದ ಹೈದರಾಬಾದ್ ಮೂಲದ ತಂಡದ ವಿರುದ್ಧ ಕಿಂಗ್ ಕೊಹ್ಲಿ 3 ಬಾರಿ ಅರ್ಧಶತಕಕ್ಕಿಂತ ಹೆಚ್ಚಿನ ರನ್ ಗಳಿಸಿದ್ದರು.

2015ರ ಐಪಿಎಲ್ನಲ್ಲಿ ಕಣಕ್ಕಿಳಿದಿದ್ದ ಗುಜರಾತ್ ಲಯನ್ಸ್ ವಿರುದ್ಧ ವಿರಾಟ್ ಕೊಹ್ಲಿ 3 ಬಾರಿ 50ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. 2016 ರಲ್ಲಿ ಐಪಿಎಲ್ ಕಣದಲ್ಲಿದ್ದ ರೈಸಿಂಗ್ ಪುಣೆ ಸೂಪರ್ ಜೈಂಟ್ ವಿರುದ್ಧ ಕಿಂಗ್ ಕೊಹ್ಲಿ 3 ಅರ್ಧ ಶತಕಗಳನ್ನು ಸಿಡಿಸಿದ್ದಾರೆ.

ಐಪಿಎಲ್ ನ ಆರಂಭದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹೆಸರಿನಲ್ಲಿ ಕಣಕ್ಕಿಳಿದಿದ್ದ ಪಂಜಾಬ್ ಕಿಂಗ್ಸ್ ವಿರುದ್ದ ಕೂಡ ವಿರಾಟ್ ಕೊಹ್ಲಿ 3 ಬಾರಿ 50ಕ್ಕೂ ಅಧಿಕ ಸ್ಕೋರ್ ಗಳಿಸಿದ್ದಾರೆ. 2022 ರಿಂದ ಐಪಿಎಲ್ ಅಭಿಯಾನ ಆರಂಭಿಸಿರುವ ಗುಜರಾತ್ ಟೈಟಾನ್ಸ್ ವಿರುದ್ಧ ವಿರಾಟ್ ಕೊಹ್ಲಿ 2 ಅರ್ಧ ಶತಕ ಗಳಿಸಿದ್ದಾರೆ.

2011 ರಲ್ಲಿ ಐಪಿಎಲ್ ನಲ್ಲಿ ಕಾಣಿಸಿಕೊಂಡಿದ್ದ ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ ವಿರಾಟ್ ಕೊಹ್ಲಿ 1 ಅರ್ಧ ಶತಕ ಸಿಡಿಸಿದ್ದಾರೆ. ಐಪಿಎಲ್ ಸೀಸನ್ 16 ರ 15ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ವಿರಾಟ್ ಕೊಹ್ಲಿ 61 ರನ್ ಬಾರಿಸಿ ಮಿಂಚಿದ್ದಾರೆ. ಇದರೊಂದಿಗೆ ಪ್ರಸ್ತುತ ಕಣದಲ್ಲಿರುವ ಎಲ್ಲಾ ತಂಡಗಳ ವಿರುದ್ಧ ಅರ್ಧಶತಕ ಬಾರಿಸಿದ ವಿಶೇಷ ದಾಖಲೆ ಕೊಹ್ಲಿ ಬರೆದಿದ್ದಾರೆ.

2011 ರ ಐಪಿಎಲ್ನಲ್ಲಿ ಕಣಕ್ಕಿಳಿದಿದ್ದ ಕೊಚ್ಚಿ ಟಸ್ಕರ್ಸ್ ಕೇರಳ ತಂಡದ ವಿರುದ್ಧ ಮಾತ್ರ ವಿರಾಟ್ ಕೊಹ್ಲಿ ಅರ್ಧಶತಕ ಗಳಿಸಿಲು ಆಗಿಲ್ಲ. ಒಂದು ಸೀಸನ್ನಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಕೊಚ್ಚಿನ್ ಟಸ್ಕರ್ಸ್ ಆರ್ಸಿಬಿ ವಿರುದ್ಧ 2 ಪಂದ್ಯಗಳನ್ನಾಡಿತ್ತು. ಆದರೆ ಈ 2 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅಜೇಯ 27 ಹಾಗೂ 23 ರನ್ ಮಾತ್ರ ಗಳಿಸಿದ್ದಾರೆ.