Kornersite

Bengaluru Just In Karnataka State

Karnataka Assembly Election 2023: ಸಿದ್ದರಾಮಯ್ಯ VS ಸೋಮಣ್ಣ ಮಧ್ಯೆ ಬಿಗ್ ಫೈಟ್! ವರುಣಾ ಮತದಾರರ ನಾಡಿ ಮಿಡಿತ ಏನು?

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಕಣ ರಂಗೇರಿದೆ. ಬಿಜೆಪಿ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದೇ ತಡ. ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಿರುವ ವರುಣಾದ ಕುರಿತು ಮತದಾರರಲ್ಲಿ ಕುತೂಹಲ ಹೆಚ್ಚಾಗಿದೆ. ಏಕೆಂದರೆ ವರುಣಾದಿಂದ ಸ್ಪರ್ಧೆ ಮಾಡುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಸೋಲಿಸಲು ಬಿಜೆಪಿ ಸಚಿವ ವಿ. ಸೋಮಣ್ಣ ಅವರನ್ನು ಕಣಕ್ಕೆ ಇಳಿಸಿದೆ.


ಲಿಂಗಾಯತ ಸಮುದಾಯದ ಮತಗಳೇ ಹೆಚ್ಚಿರುವ ಕ್ಷೇತ್ರದಲ್ಲಿ ವಿ.ಸೋಮಣ್ಣ (V.Somanna) ಅವರ ಹೆಸರು ಈಗ ವರುಣಾ ಅಂಗಳದಲ್ಲಿಯೂ ಸದ್ದು ಮಾಡುತ್ತಿದೆ. ಲಿಂಗಾಯತರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಆ ಸಮುದಾಯದ ನಾಯಕರನ್ನೇ ಹುರಿಯಾಳಾಗಿಸಿ ಸಿದ್ದುಗೆ ಪ್ರಬಲ ಪೈಪೋಟಿ ನೀಡಲು ಬಿಜೆಪಿ ಮುಂದಾಗಿದೆ. ಸಿದ್ದು ವಿರುದ್ಧ ಯಡಿಯೂರಪ್ಪ ಪುತ್ರ ವಿಜಯೇಂದ್ರನನ್ನು ಕಣ್ಣಕ್ಕಿಳಿಸಲು ಬಿಜೆಪಿ ಹೈಕಮಾಂಡ್‌ ಗ್ರೀನ್‌ ಸಿಗ್ನಲ್‌ ಕೊಟ್ಟಿತ್ತು. ಆದರೆ ಮಗನ ರಾಜಕೀಯ ಭವಿಷ್ಯ ಹಿತದೃಷ್ಟಿಯಿಂದ ವರುಣಾದಿಂದ ವಿಜಯೇಂದ್ರ ಸ್ಪರ್ಧೆಗೆ ಬಿಎಸ್‌ವೈ ವಿರೋಧ ವ್ಯಕ್ತಪಡಿಸಿದ್ದರು. ಈಗ ಸಿದ್ದು ವಿರುದ್ಧ ಸೆಣಸಲು ಸೋಮಣ್ಣ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.


ರಾಜಕೀಯ ಇತಿಹಾಸ ನೋಡುವುದಾದರೆ ವರುಣಾ ವಿಧಾನಸಭಾ ಕ್ಷೇತ್ರವು ಮೊದಲು ಚಾಮುಂಡೇಶ್ವರಿ ಕ್ಷೇತ್ರದಲ್ಲಿತ್ತು. 2008ರಲ್ಲಿ ಚಾಮುಂಡೇಶ್ವರಿಯಿಂದ ವಿಭಜನೆಯಾಗಿ ವರುಣಾ ಕ್ಷೇತ್ರ ಸೃಷ್ಟಿಯಾಯಿತು. ಆಗ ಸಿದ್ದರಾಮಯ್ಯ ಅವರಿಗೆ ಧರ್ಮ ಸಂಕಟ ಶುರುವಾಯಿತು. ಏಕೆಂದರೆ ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡಬೇಕಾ ಅಥವಾ ವರುಣಾದಲ್ಲಿ ಸ್ಪರ್ಧೆ ಮಾಡಬೇಕಾ ಎಂಬ ಧರ್ಮ ಸಂಕಟಕ್ಕೆ ಅವರು ಸಿಲುಕಿದ್ದರು. ಕೊನೆಗೆ ಸಿದ್ದು, ವರುಣಾವನ್ನು ತಮ್ಮ ಕರ್ಮಭೂಮಿಯನ್ನಾಗಿ ಆಯ್ದುಕೊಂಡರು.


ವರುಣಾ ಕ್ಷೇತ್ರ ವಿಭಜನೆಯಾದಾಗಿನಿಂದ ಇಲ್ಲಿಯವರೆಗೆ ಮೂರು ಚುನಾವಣೆ ನಡೆದಿದೆ. 3 ಚುನಾವಣೆಗಳ ಪೈಕಿ ಸಿದ್ದರಾಮಯ್ಯ 2 ಬಾರಿ ಹಾಗೂ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಒಂದು ಬಾರಿ ಗೆಲುವು ಸಾಧಿಸಿದ್ದಾರೆ. ಈಗ ಮತ್ತೆ ಸಿದ್ದರಾಮಯ್ಯ ಕಣಕ್ಕೆ ಇಳಿದಿದ್ದಾರೆ.
ಮೊದಲ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾಗ ಸಿದ್ದರಾಮಯ್ಯ ಅವರು, ಬಿಜೆಪಿ ಅಭ್ಯರ್ಥಿ ಎಲ್‌.ರೇವಣಸಿದ್ದಯ್ಯ ವಿರುದ್ಧ 18,837 ಮತಗಳ ಅಂತರದಿಂದ ಜಯ ಗಳಿಸಿದ್ದರು. 2013ರಲ್ಲಿ ಮತ್ತೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಕೆಜೆಪಿ ಪಕ್ಷ ಕಟ್ಟಿದ್ದರು. ಈ ಸಂದರ್ಭದಲ್ಲಿ ಬಿಎಸ್‌ವೈ ಹೊಸ ಪಕ್ಷದಿಂದ ವರುಣಾದಲ್ಲಿ ಕಾಪು ಸಿದ್ದಲಿಂಗಸ್ವಾಮಿ ಸ್ಪರ್ಧಿಸಿದ್ದರು. ಆಗ ಸಿದ್ದರಾಮಯ್ಯ 19,641 ಮತಗಳ ಅಂತರದಿಂದ ಕಾಪು ಸಿದ್ದಲಿಂಗಸ್ವಾಮಿ ವಿರುದ್ಧ ಭರ್ಜರಿ ಜಯ ಗಳಿಸಿದ್ದರು. ಆ ಸದರ್ಭದಲ್ಲಿ ಸಿದ್ದು ಸಿಎಂ ಆದರು.


2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ವರುಣಾ ಕ್ಷೇತ್ರವನ್ನು ಪುತ್ರ ಯತೀಂದ್ರನಿಗೆ ಬಿಟ್ಟುಕೊಟ್ಟು, ಚಾಮುಂಡೇಶ್ವರಿ ಹಾಗೂ ಬಾದಾಮಿಯಿಂದ ಸ್ಪರ್ಧಿಸಿದ್ದರು. ಆಗ ಯತೀಂದ್ರ ತಂದೆಗಿಂತಲೂ ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ವರುಣಾದಲ್ಲಿ ಗಮನ ಸೆಳೆದಿದ್ದರು. ಈ ಚುನಾವಣೆಯಲ್ಲಿ 96,435 ಮತಗಳನ್ನು ಪಡೆದ ಯತೀಂದ್ರ, 58,616 ಮತಗಳ ಅಂತರದಿಂದ ಬಿಜೆಪಿ ಟಿ.ಬಸವರಾಜು ವಿರುದ್ಧ ಜಯಭೇರಿ ಬಾರಿಸಿದ್ದರು.


ಈ ಕ್ಷೇತ್ರದಲ್ಲಿ 70,000 ಲಿಂಗಾಯತರು, ಕುರುಬರು 35,000, ಪರಿಶಿಷ್ಟ ಜಾತಿ 43,000, ಪರಿಶಿಷ್ಟ ಪಂಗಡ 23,000, ಒಕ್ಕಲಿಗರು 12,000 ಹಾಗೂ ಇನ್ನಿತರ ಮತದಾರುರ ಸುಮಾರು 12 ಸಾವಿರ ಇದ್ದಾರೆ. ಜಾತಿ ಲೆಕ್ಕಾಚಾರ ನೋಡಿದರೆ, ಲಿಂಗಾಯತರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಲಿಂಗಾಯತರ ಮತವನ್ನು ಸೆಳೆಯಲು ಬಿಜೆಪಿ ಈ ತಂತ್ರ ಹೆಣೆದಿದೆ ಎನ್ನಲಾಗುತ್ತಿದೆ.


ಇಲ್ಲಿಯವರೆಗೆ ವರುಣಾ ಕ್ಷೇತ್ರದ ಲಿಂಗಾಯತ ಮತದಾರರು ಸಿದ್ದರಾಮಯ್ಯ ಬೆಂಬಲಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನಿಲ್ಲುತ್ತಿದ್ದ ಹಿನ್ನೆಲೆಯಲ್ಲಿ ಅವರ ಗೆಲುವು ಸುಲಭವಾಗುತ್ತ ಬಂದಿದೆ. ಲಿಂಗಾಯತ ಸಮುದಾಯ ಬಿಟ್ಟರೆ ವರುಣಾದಲ್ಲಿ ನಂತರದ ಸ್ಥಾನದಲ್ಲಿ ಕುರುಬ ಮತ್ತು ಪರಿಶಿಷ್ಟ ಜಾತಿ ಸಮುದಾಯ ಮತಗಳಿರುವುದರಿಂದ, ಈ ವರ್ಗಗಳ ಮತ ಸಿದ್ದರಾಮಯ್ಯ ಅವರಿಗೆ ಕಟ್ಟಿಟ್ಟ ಬುತ್ತಿ. ಹಿಂದುಳಿದ ವರ್ಗಗಳ ಮತದಾರರು ಕೂಡ ಸಿದ್ದು ಪರವಾಗಿದ್ದಾರೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ. ಇದು ಸಿದ್ದರಾಮಯ್ಯ ಗೆಲುವಿಗೆ ವರದಾನವಾಗಬಹುದು ಎನ್ನುವ ಮಾತು ಕೇಳಿ ಬರುತ್ತಿದೆ.


ಲಿಂಗಾಯತ ಮತಗಳನ್ನಷ್ಟೇ ನಂಬಿಕೊಂಡು ಚುನಾವಣೆಗೆ ಧುಮುಕಿದರೆ ಗೆಲುವು ಕಷ್ಟ ಎಂಬ ಅರಿವು ಕೂಡ ಅವರಿಗಿತ್ತು. ವರುಣಾ ಸ್ಪರ್ಧಿಸಬೇಕಾದರೆ ನನ್ನ ಮೊದಲ ಆದ್ಯತೆ ಗೋವಿಂದರಾಜನಗರ ಅಥವಾ ಚಾಮರಾಜನಗರ ಎಂದು ವಿ. ಸೋಮಣ್ಣ ಹೇಳಿ, ಹಿಂಜರಿದಿದ್ದರು. ಆದರೆ, ಹೈಕಮಾಂಡ್ ಸೋಮಣ್ಣ ಅವರಿಗೆ ಚಾಮರಾಜನಗರದೊಂದಿಗೆ ವರುಣಾವನ್ನು ಕೂಡ ಕೊಟ್ಟಿದೆ. 70 ವರ್ಷ ದಾಟಿದ ಸೋಮಣ್ಣ ಅವರನ್ನು ಈಶ್ವರಪ್ಪ, ಶೆಟ್ಟರ್‌ ಮಾದರಿಯಲ್ಲಿ ನಿವೃತ್ತಿಗೊಳಿಸುವ ಎದೆಗಾರಿಕೆಯನ್ನು ತೋರದ ಹೈಕಮಾಂಡ್‌ ಜಾಣ ನಡೆ ಇಟ್ಟಿದೆ. ಈ ಮೂಲಕ ಬಿಜೆಪಿ ಹೈಕಮಾಂಡ್ ಯಾವ ತಂತ್ರ ಹೆಣೆದಿದೆ ಎಂಬುವುದು ಸದ್ಯದಲ್ಲಿಯೇ ತಿಳಿದು ಬರಲಿದೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Bengaluru State

ಬೈಕ್, ಟ್ಯಾಕ್ಸಿ ಬಂದ್ ಮಾಡುವಂತೆ ಆಗ್ರಹಿಸಿ ಮುಷ್ಕರ!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವೈಟ್ ಬೋರ್ಡ್ ಬೈಕ್‌ ಟ್ಯಾಕ್ಸಿಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಆಟೋ ಚಾಲಕರು ಹಾಗೂ ಸಂಘಟನೆಗಳು ಭಾನುವಾರ ಮಧ್ಯರಾತ್ರಿಯಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ