Bangalore : ಕಾಂಗ್ರೆಸ್ ನ ಪ್ರಭಲ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಠಕ್ಕರ್ ನೀಡುವುದಕ್ಕಾಗಿ ಬಿಜೆಪಿ ರಣತಂತ್ರ ಹೆಣೆದ್ದಿದ್ದು, ಕನಕಪುರದಲ್ಲಿ ಕಂದಾಯ ಸಚಿವ ಅಶೋಕ್ಗೆ (R Ashok) ಹಾಗೂ ವರುಣಾ ಕ್ಷೇತ್ರದಲ್ಲಿ ವಿ. ಸೋಮಣ್ಣಗೆ ಟಿಕೆಟ್ ನೀಡಿದೆ. ಆದರೆ, ಕಾಂಗ್ರೆಸ್ ಕೂಡ ಪ್ರತಿತಂತ್ರ ಹೆಣೆಯಲು ಆರಂಭಿಸಿದೆ.
ಆರ್. ಅಶೋಕ್ ಪ್ರತಿನಿಧಿಸುತ್ತಿರುವ ಪದ್ಮನಾಭನಗರದಲ್ಲಿ ಡಿಕೆ ಶಿವಕುಮಾರ್ (DK Shivakumar) ಸಹೋದರ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ (DK Suresh) ಅವರಿಗೆ ಟಿಕೆಟ್ ನೀಡಲು ಮಾತುಕತೆ ನಡೆಯುತ್ತಿದೆ. ಅದೇ ರೀತಿ ಚಾಮರಾಜನಗರದಲ್ಲಿ ವಿ.ಸೋಮಣ್ಣಗೆ ಠಕ್ಕರ್ ಕೊಡಲು ಕಾಂಗ್ರೆಸ್ ಮುಂದಾಗಿದೆ.
ಕನಕಪುರದಲ್ಲಿ ಡಿಕೆ ಶಿವಕುಮಾರ್ ಅವರನ್ನು ಕಟ್ಟಿ ಹಾಕಲು ಬಿಜೆಪಿ ಹೈಕಮಾಂಡ್ ಅಶೋಕ್ ಅವರಿಗೆ ಟಿಕೆಟ್ ನೀಡಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಅಶೋಕ್ ವಿರುದ್ಧ ಡಿಕೆ ಸುರೇಶ್ ಅವರನ್ನು ಕಣಕ್ಕೆ ಇಳಿಸಿದರೆ ಉತ್ತಮ ಎಂಬ ಚರ್ಚೆ ಮಾಡುತ್ತಿದೆ.
ಈಗಾಗಲೇ ಪದ್ಮನಾಭನಗರದಿಂದ (Padmanabhanagar) ರಘುನಾಥ್ ನಾಯ್ಡು ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಒಂದು ಬಾರಿ ಟಿಕೆಟ್ ನೀಡಿದ ಬಳಿಕ ಬದಲಾವಣೆ ಮಾಡಿದರೆ ತಪ್ಪು ಸಂದೇಶ ಹೋಗುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್ ತನ್ನ ನಿರ್ಧಾರವನ್ನು ಬದಲಾವಣೆ ಮಾಡುತ್ತಾ ಎಂಬ ಪ್ರಶ್ನೆ ಕೂಡ ಮೂಡುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿ.ಕೆ. ಸುರೇಶ್, ಈ ವಿಚಾರವಾಗಿ ನಾನು ಏನೂ ಮಾತನಾಡುವುದಿಲ್ಲ ಎಂದಿದ್ದಾರೆ. ಈ ಹಿಂದೆ ನಿಖಿಲ್ ಕುಮಾರಸ್ವಾಮಿ ವಿರುದ್ಧ ರಾಮನಗರದಿಂದ ಡಿ.ಕೆ. ಸುರೇಶ್ ಸ್ಪರ್ಧೆ ಮಾಡಬೇಕು ಎಂಬ ಬೇಡಿಕೆ ಕಾಂಗ್ರೆಸ್ನಿಂದ ಬಂದಿತ್ತು. ಈಗ ಸಹೋದರನ ವಿರುದ್ಧವೇ ಅಶೋಕ್ ಕಣಕ್ಕೆ ಇಳಿಯುತ್ತಿರುವ ಕಾರಣ ಕಾಂಗ್ರೆಸ್ ಮುಂದಿನ ನಡೆ ಏನು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.