ವೀಕೆಂಡ್ ವಿತ್ ರಮೇಶ್ (Weekend with Ramesh) ಕಾರ್ಯಕ್ರಮದಲ್ಲಿ ಈ ವಾರ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಚರ್ಚೆ ಶುರುವಾಗಿತ್ತು. ಸದ್ಯ ಈ ಚರ್ಚೆಗೆ ಬ್ರೇಕ್ ಬಿದ್ದಿದ್ದು, ಡಾಲಿ ಕುರ್ಚಿಯ ಮೇಲೆ ಕುಳಿತಿದ್ದಾರೆ.

ಈ ವಾರದ ಅತಿಥಿಯಾಗಿ ಡಾಲಿ ಧನಂಜಯ (Dolly Dhananjay) ಸಾಧಕರ ಕುರ್ಚಿಯ ಮೇಲೆ ಕುಳಿತಿದ್ದಾರೆ. ಸದ್ಯ ಈ ಪ್ರೋಮೋವನ್ನು ಜೀ ಕನ್ನಡ ವಾಹಿನಿಯು ರಿಲೀಸ್ ಕೂಡ ಮಾಡಿದೆ.
ಪ್ರೋಮೋದಲ್ಲಿ ಹತ್ತಾರು ವಿಷಯಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಡಾಲಿ ಬಾಲ್ಯ, ಬಾಲ್ಯದ ಗೆಳೆಯರು, ಕುಟುಂಬ ಮತ್ತು ಅವರ ಸಹೋದರಿಯ ಕಥೆಯನ್ನೂ ಸೂಕ್ಷ್ಮವಾಗಿ ಹೇಳಲಾಗಿದೆ. ಕುರ್ಚಿಯ ಮೇಲೆ ಕುಳಿತ ಡಾಲಿ ತಮ್ಮ ಬದುಕಿನ ಪ್ರತಿಯೊಂದು ಹೆಜ್ಜೆಗಳನ್ನು ನೆನಪಿಸಿಕೊಂಡು ಕಣ್ಣೀರು ಸುರಿಸಿದ್ದಾರೆ.

ಸಮಾಜದ ಬಗ್ಗೆ ಸದಾ ಕಾಲ ಚಿಂತಿಸುವ ಡಾಲಿ, ಸಿನಿಮಾ ಕ್ಷೇತ್ರಕ್ಕೆ ಬಂದಿದ್ದು ಅಚ್ಚರಿಯ ಸಂಗತಿ. ಇಂಜಿನೀಯರಿಂಗ್ ಓದಿಕೊಂಡಿದ್ದ ಡಾಲಿ, ಬಣ್ಣದ ಮೇಲಿನ ಗೀಳಿನಿಂದಾಗಿ ರಂಗಭೂಮಿಗೆ ಪ್ರವೇಶ ಮಾಡಿದ್ದಾರೆ. ಮೈಸೂರಿನಲ್ಲಿ ರಂಗತಂಡ ಕಟ್ಟಿಕೊಂಡು ಹಲವಾರು ನಾಟಕಗಳಲ್ಲಿ ಅಭಿನಯಿಸಿ, ಕಿರುಚಿತ್ರದ ಮೂಲಕ ಚಿತ್ರೋದ್ಯಮಕ್ಕೆ ಕಾಲಿಟ್ಟಿದ್ದರು. ಸದ್ಯ ಈ ಡಾಲಿ ಧನಂಜಯ, ದೊಡ್ಡ ಸ್ಟಾರ್ ನಟರಾಗಿ ಬೆಳೆದು ನಿಂತಿದ್ದಾರೆ.

ಸಾಮಾನ್ಯ ಕುಟುಂಬದಿಂದ ಬಂದಿರುವ ಡಾಲಿ, ತತ್ವ ಸಿದ್ಧಾಂತಗಳ ವಿರುದ್ಧ ಯಾವತ್ತೂ ಹೋದವರು ಅಲ್ಲ. ಈ ಕಾರಣದಿಂದಾಗಿ ವಿವಾದಕ್ಕೂ ಕಾರಣರಾಗಿದ್ದಾರೆ. ನೇರ ಮಾತುಗಳು ಅವರನ್ನು ಆಗಾಗ ತೊಂದರೆಗೆ ತಂದು ಸಿಲುಕಿಸಿವೆ. ಆದರೂ, ಡಾಲಿ ಬದಲಾಗಲಿಲ್ಲ. ಹೀಗಾಗಿ ಡಾಲಿ ಅವರ ಬದುಕಿನ ಅನಾವರಣಗೊಂಡ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನೋಡಲು ಅಭಿಮಾನಿಗಳು ಹಾಗೂ ಪ್ರೇಕ್ಷಕರು ಕಾಯುತ್ತಿದ್ದಾರೆ.