Bangalore : ಮಹಿಳೆಯರಿಗೆ ಕಿರುಕುಳ ನೀಡುವವರಿಗೆ ನಾಲ್ಕು ತದಿಕಿ ಬುದ್ಧಿ ಹೇಳಿ, ಸಮಾಜದಲ್ಲಿ ಸ್ವಾಸ್ಥ್ಯ ಮರೆಯಬೇಕಾಗಿದ್ದ ಪೊಲೀಸ್ ಅಧಿಕಾರಿಯೇ ದುರ್ವರ್ತನೆ ತೋರಿ ಅಮಾನತಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ವಿವಾಹ ವಿಚ್ಛೇದನ ಪ್ರಕರಣದಲ್ಲಿ ಹೇಳಿಕೆ ನೀಡಲು ಬಂದಿದ್ದ ಮಹಿಳೆಯ ಸೊಂಟ ಹಾಗೂ ನಿತಂಬ ಮುಟ್ಟಿದ ಆರೋಪದ ಹಿನ್ನೆಲೆಯಲ್ಲಿ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯ ಪಿಎಸ್ ಐ ಮಂಜುನಾಥ್ ಎಂಬಾತನನ್ನು ಅಮಾನತು ಮಾಡಲಾಗಿದೆ.

ಪೊಲೀಸ್ ಠಾಣೆಗೆ ದೂರು ನಿಡಲು ಹೋಗಿದ್ದ ಮಹಿಳೆಯೊಬ್ಬರು ತನ್ನ ಮೇಲೆ ಸುದ್ದಗುಂಟೆಪಾಳ್ಯ ಪಿಎಸ್‌ಐ ಮಂಜುನಾಥ್ ಅವರು ಮೈ-ಕೈ ಹಾಗೂ ಸೊಂಟ ಮುಟ್ಟಿ ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು. ಅಲ್ಲದೇ, ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಗೆ ಬಂದು ಪಿಎಸ್‌ಐ ಮೇಲೆ ಲಿಖಿತ ದೂರು ದಾಖಲಿಸಿದ್ದರು. ಮಹಿಳೆ ದೂರಿನ ಆಧಾರದಲ್ಲಿ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು. ನಂತರ ದೂರು ಇದ್ದ ಪಿಎಸ್‌ಐ ಮೇಲೆ ತನಿಖೆ ಮಾಡಲಾಗಿದ್ದು, ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಪಿಎಸ್‌ಐ ನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಪಿಎಸ್‌ಐ ಮಂಜುನಾಥ ವಿರುದ್ಧ ಮಹಿಳೆ ಅನುಚಿತ ವರ್ತನೆ ಆರೋಪ ಮಾಡಿದ್ದರು. ಈ ಸಂಬಂಧ ಏ.10ರಂದು ಟ್ವಿಟರ್‌ನಲ್ಲಿ ಬರೆದು ನಗರ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿದ್ದರು.‘ಸ್ನೇಹಿತರ ವಿವಾಹ ವಿಚ್ಛೇದನ ಪ್ರಕರಣ ಸಂಬಂಧ ಹೇಳಿಕೆ ದಾಖಲಿಸಲು ಏ.8ರಂದು ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಗೆ ತೆರಳಿದ್ದೆ. ಈ ವೇಳೆ ಪಿಎಸ್‌ಐ ಮಂಜುನಾಥ ಅವರು ಹೇಳಿಕೆ ದಾಖಲಿಸುವ ನೆಪದಲ್ಲಿ ನನ್ನ ಕೈ, ಸೊಂಟ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೆ ರಾತ್ರಿ ವಾಟ್ಸಾಪ್‌ನಲ್ಲಿ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಈ ಘಟನೆಯಿಂದ ನಾನು ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದೇನೆ. ಈ ಕುರಿತು ನಾನು ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ. ಈ ಸಂದರ್ಭವನ್ನು ನಾನು ಹೇಗೆ ನಿಭಾಯಿಸಬೇಕು ಎಂಬುದು ಹೊಳೆಯುತ್ತಿಲ್ಲ. ಈ ಬಗ್ಗೆ ಸಲಹೆ ನೀಡಿ’ ಎಂದು ಸಂತ್ರಸ್ತ ಮಹಿಳೆ ಟ್ವಿಟ್ಟರ್ ನಲ್ಲಿ ಮನವಿ ಮಾಡಿದ್ದರು. ಟ್ವಿಟರ್‌ನಲ್ಲಿ ದಾಖಲಾಗಿದ್ದ ದೂರಿನ ಆಧಾರದಲ್ಲಿ ಮಹಿಳೆಯನ್ನು ಪೊಲೀಸ್ ಕಚೇರಿಯಿಂದ ಸಂಪರ್ಕ ಮಾಡಿದ್ದಾರೆ. ನಂತರ, ನೀವು ಪೊಲೀಸ್ ಠಾಣೆಗೆ ಬಂದು ಎಫ್ಐಆರ್ ದಾಖಲಿಸಲು ಲಿಖಿತ ದೂರು ನೀಡಬೇಕು ಎಂದು ಹೇಳಲಾಗಿತ್ತು. ದೂರು ಹೇಳಿದ ನಂತರ ಮಹಿಳೆ ಪೊಲೀಸ್ ಠಾಣೆಗೆ ಬಂದು ಲಿಖಿತ ರೂಪದಲ್ಲಿ ದೂರು ನೀಡಿದ್ದಾರೆ. ಮಹಿಳೆಯ ದೂರಿದ ಆಧಾರದ ಮೇಲೆ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಹಿರಿಯ ಅಧಿಕಾರಿಗೆ ತನಿಖೆಯ ಜವಾಬ್ದಾರಿ ನೀಡಲಾಗಿತ್ತು. ಘಟನೆ ಕುರಿತು ಎಸಿಪಿ ಹಂತದಲ್ಲಿ ತನಿಖೆಗೆ ಆದೇಶಿಸಲಾಗಿತ್ತು. ಇನ್ನು ತನಿಖೆಯಲ್ಲಿ ಪಿಎಸ್ ಐ ಹೇಳಿಕೆ ದಾಖಲಿಸಲು ಬಂದಿದ್ದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿರುವುದು ತಿಳಿದು ಬಂದಿದೆ. ಒಬ್ಬ ಅಧಿಕಾರಿಯಾಗಿ ಈ ರೀತಿ ಮಾಡಿರುವುದು ತಪ್ಪು. ಹೀಗಾಗಿ ಆತನ ಮೇಲೆ ಎಫ್ ಐ ಆರ್ ದಾಖಲಾಗಿದ್ದು, ಅಮಾನತು ಮಾಡಲಾಗಿದೆ ಎಂದು ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬ ಮಾಹಿತಿ ನೀಡಿದ್ದಾರೆ.