Haveri : ಮೊನ್ನೆಯಷ್ಟೇ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ (BJP) ಬುಧವಾರ ರಾತ್ರಿ ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಟಿಕೆಟ್ ಕೈತಪ್ಪಿದ್ದಕ್ಕೆ ಹಾಲಿ ಶಾಸಕ ನೆಹರೂ ಓಲೇಕಾರ್ (Nehru Olekar) ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸಿಎ ಬಸವರಾಜ ಬೊಮ್ಮಾಯಿ (Basavaraj Bommai) ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನನಗೆ ಟಿಕೆಟ್ ಮಿಸ್ ಆಗಲು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಜಿಲ್ಲಾಧ್ಯಕ್ಷ ಸಿದ್ದರಾಜ ಕಲ್ಲಕೋಟಿ ಕಾರಣ. ಆತ ಅವನ ಕ್ಷೇತ್ರದ ಚುನಾವಣೆ ಹೇಗೆ ಮಾಡುತಾನೆ ಎಂಬುವುದನ್ನು ನಾನು ನೋಡುತ್ತೇನೆ. ಜಿಲ್ಲೆಯಲ್ಲಿ ಎಷ್ಟು ಸೀಟು ಬಿಜೆಪಿ ಗೆಲ್ಲಿಸುತ್ತಾನೆ. ಯಡಿಯೂರಪ್ಪ ಹೆಸರಿನಲ್ಲಿ ಸಿಎಂ ಆದವನು. ಯಡಿಯೂರಪ್ಪನವರಿಗೆ ಮೋಸ ಮಾಡಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಯಕರಿಗೆ ಸ್ವಲ್ಪ ದಿನಗಳಲ್ಲಿ ಎಲ್ಲವೂ ಗೊತ್ತಾಗುತ್ತದೆ. ಉದ್ದೇಶಪೂರ್ವಕವಾಗಿ ಟಿಕೆಟ್ ತಪ್ಪಿಸಿದ್ದಾರೆ. ರಾಜಕಾರಣದಲ್ಲಿ ನನ್ನ ಬೆಳವಣಿಗೆ ಸಹಿಸಲಾರದೆ ತಪ್ಪಿಸಿದ್ದಾರೆ. ಮುಖ್ಯಮಂತ್ರಿ ಮಾಡಿದ ಹಗರಣವನ್ನು ಬಯಲಿಗೆ ಎಳೆಯುತ್ತೇನೆ. ಆತ ಮಾಡಿದ ಘನಕಾರ್ಯವನ್ನು ಜನರ ಮುಂದೆ ಇಡುತ್ತನೆ. ಸೂಕ್ತ ತನಿಖೆ ಮಾಡಿಸುತ್ತೇನೆ. ಹಿಂದಿನ ಭಾರಿ ಸಹ ಟಿಕೆಟ್ ತಪ್ಪಿಸಲು ಓಡಾಡಿದ್ದರು ಎಂದು ಆರೋಪಿಸಿದ್ದಾರೆ.