Bangalore : ಬಿಜೆಪಿಯಲ್ಲಿ ಬಂಡಾಯದ ಬೆಂಕಿ ಬಿರುಗಾಳಿ ಜೋರಾಗಿದ್ದು, ಹಲವರು ಈಗಾಗಲೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿಯಲ್ಲಿ ಹಲವು ಪ್ರಮುಖ ನಾಯಕರು ಕೂಡ ಟಿಕೆಟ್ ನಿಂದ ವಂಚಿತರಾಗಿದ್ದಾರೆ. ಹೀಗಾಗಿ ಹಲವರು ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದಾರೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ(Laxman Savadi) ಕೂಡ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದು, ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಪಕ್ಷಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ (Congress) ಸೇರ್ಪಡೆ ಖಚಿತವಾಗಿದ್ದು, ಪಕ್ಷದ ನಾಯಕರಲ್ಲಿ ಮೂರು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ ಎನ್ನಲಾಗಿದೆ.
ಈ ಮೂಲಕ ಬೆಳಗಾವಿಯಲ್ಲಿ (Belagavi) ರಮೇಶ್ ಜಾರಕಿಹೊಳಿಗೆ (Ramesh Jarkiholi) ಠಕ್ಕರ್ ಕೊಡಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ. ಅದಕ್ಕಾಗಿ ಲಕ್ಷ್ಮಣ ಸವದಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ತಂತ್ರ ಹೆಣೆದಿದ್ದಾರೆ. ಬೆಂಗಳೂರಿಗೆ ಆಗಮಿಸಿದ ಸವದಿ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ (Siddaramaiah), ಡಿಕೆಶಿ (DK Shivakumar), ಸುರ್ಜೇವಾಲ (Randeep Surjewala) ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಹಲವು ಷರತ್ತುಗಳನ್ನು ‘ಕೈ’ ನಾಯಕರ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಕಾಗವಾಡ ಹಾಗೂ ಅಥಣಿ ಜವಾಬ್ದಾರಿ ನನಗೆ ನೀಡಿ. ಕಾಂಗ್ರೆಸ್ ಗೆಲ್ಲಿಸಿಕೊಂಡು ಬರುತ್ತೇನೆ. ನಾನು ಹಾಗೂ ನನ್ನ ಮಗ ಇಬ್ಬರಿಗೂ ಟಿಕೆಟ್ ಕೊಡಿ. ಅಥಣಿ ಹಾಗೂ ಕಾಗವಾಡ ಎರಡರಲ್ಲಿ ಯಾರು ಎಲ್ಲಿ ನಿಲ್ಲಬೇಕು ಎಂಬುವುದನ್ನು ನಾವೇ ಚರ್ಚೆ ಮಾಡಿ ಹೇಳುತ್ತೇವೆ ಎಂದು ಕಾಂಗ್ರೆಸ್ ನಾಯಕರಲ್ಲಿ ಸವದಿ ಮೂರು ಬೇಡಿಕೆ ಇಟ್ಟಿದ್ದಾರೆ. ಸವದಿ ಡಿಮ್ಯಾಂಡ್ ಆಲಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಹೈಕಮಾಂಡ್ ಜೊತೆ ಮಾತನಾಡಿ ಹೇಳುವ ಭರವಸೆ ನೀಡಿದ್ದಾರೆ.
ಹೈಕಮಾಂಡ್ ಬಳಿ ನಿಮ್ಮ ಬೇಡಿಕೆ ಮುಂದಿಟ್ಟು ಎರಡು ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತೇವೆ. ಅಕಸ್ಮಾತ್ ಕಾಗವಾಡ ಟಿಕೆಟ್ ವಿಚಾರದಲ್ಲಿ ಹೈಕಮಾಂಡ್ ಒಪ್ಪದಿದ್ದರೆ ನೀವು ಅಥಣಿಯಿಂದ ಸ್ಪರ್ಧೆ ಮಾಡಿ. ಹೈಕಮಾಂಡ್ ಒಂದೇ ಟಿಕೆಟ್ ಎಂದರೆ ಕಾಗವಾಡದಲ್ಲಿ ನೀವು ಸಹಕಾರ ಕೊಡಲೇಬೇಕು ಎದು ಹೇಳಿದ್ದಾರೆ ಎನ್ನಲಾಗಿದೆ.
ಎರಡು ಟಿಕೆಟ್ ಕೊಡಿ. ಎರಡು ಕ್ಷೇತ್ರ ಗೆಲ್ಲಿಸಿಕೊಂಡು ಬರುತ್ತೇನೆ. ಅದನ್ನ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಿ. ಕೊನೆ ಗಳಿಗೆಯಲ್ಲಿ ಆಗದಿದ್ದರೆ ಕಾಗವಾಡದಲ್ಲಿ ಖಂಡಿತ ನಾನು ಸಹಕಾರ ಕೊಡುತ್ತೇನೆ. ಅಥಣಿಯಲ್ಲಿ ನಾನು ಅಥವಾ ಪುತ್ರ ಸ್ಪರ್ಧೆ ಮಾಡಿದರೆ ಕಷ್ಟವೇನಿಲ್ಲ. ಕಾಗವಾಡದಲ್ಲಿ ನಾನು ಎಫರ್ಟ್ ಹೆಚ್ಚು ಹಾಕಿ ಗೆಲ್ಲಿಸಿಕೊಂಡು ಬರುತ್ತೇನೆ. ಅದಕ್ಕಾಗಿ ನನಗೆ ಎರಡೂ ಟಿಕೆಟ್ ನೀಡಿ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಭೇಟಿಗೆ ಮುನ್ನ ಹೋಟೆಲ್‌ಅಲ್ಲಿ ಸುರ್ಜೇವಾಲ ಮತ್ತು ಡಿಕೆಶಿ ಸಭೆ ನಡೆಸಿದರು. ಬಳಿಕ ಸಿದ್ದರಾಮಯ್ಯ ಮನೆಗೆ ಆಗಮಿಸಿ ಸವದಿ ಕಾಂಗ್ರೆಸ್ ಸೇರ್ಪಡೆ ವಿಚಾರದ ಕುರಿತು ಮಾತುಕತೆ ನಡೆಸಿದ್ದಾರೆ. ಇಂದು ಕಾಂಗ್ರೆಸ್ ಕಚೇರಿಯಲ್ಲಿ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರುವುದಾಗಿ ಸವದಿ ತಿಳಿಸಿದ್ದಾರೆ.