Bangalore : ಕಾಂಗ್ರೆಸ್ (Congress) ಪಕ್ಷದ ಮಾಜಿ ಶಾಸಕ ವೆಂಕಟಸ್ವಾಮಿ(54) (Venkataswamy) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ದೇವನಹಳ್ಳಿ (Devanahalli) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ವೆಂಕಟಸ್ವಾಮಿ ಅವರಿಗೆ ಕಳೆದ ಒಂದು ತಿಂಗಳಲ್ಲಿ ಮೂರು ಬಾರಿ ಎದೆನೋವು ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಕಳೆದ ಮೂರು ದಿನಗಳ ಹಿಂದೆ ಸಹ ಹೃದಯಾಘಾತಕ್ಕೆ ಒಳಗಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ತಡರಾತ್ರಿ 2:20ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಅವರು ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಆಗಲಿದ್ದು, ಸ್ವಗ್ರಾಮ ಸಾದಹಳ್ಳಿಯ ಮನೆಯ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಈ ಬಾರಿಯೂ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿದ್ದ ಅವರು, ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಆದರೆ ಮಾ.21 ರಂದು ಪ್ರಚಾರ ಮುಗಿಸಿ ಮನೆಗೆ ಬಂದಾಗ ಮೊದಲ ಬಾರಿಗೆ ಹೃದಯಾಘಾತವಾಗಿತ್ತು. ನಂತರ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾಗಿದ್ದರು. ಮತ್ತೆ ಎರಡು ಬಾರಿ ಹೃದಯಾಘಾತವಾಗಿತ್ತು. ಈಗ ಮೂರನೇ ಬಾರಿಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಾಜಿ ಶಾಸಕ ವೆಂಕಟಸ್ವಾಮಿ ಅವರ ಅಂತಿಮ ದರ್ಶನಕ್ಕೆ ಕಾಂಗ್ರೆಸ್ ನಾಯಕರು ಸೇರಿದಂತೆ ಜನ ಆಗಮಿಸಲಿದ್ದಾರೆ.
2008ರಲ್ಲಿ ದೇವನಹಳ್ಳಿ ಕ್ಷೇತ್ರದ ಕಾಂಗ್ರೆಸ್‍ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ವೆಂಕಟಸ್ವಾಮಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. 2013 ಹಾಗೂ 2018 ರಲ್ಲಿ ಪುನಃ ಸ್ಪರ್ಧೆ ಮಾಡಿ ಸೋತಿದ್ದರು.