Hubli : ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಶಿಗ್ಗಾಂವಿ (Shiggaavi) ಮತಕ್ಷೇತ್ರದಿಂದ ಶನಿವಾರ ಶಿಗ್ಗಾಂವಿಗೆ ತೆರಳಿ ಚುನಾವಣಾ ಅಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.

ಬೊಮ್ಮಾಯಿ ನಾಮಪತ್ರ (Nomination Paper) ಸಲ್ಲಿಕೆಗೂ ಮುನ್ನ ಹುಬ್ಬಳ್ಳಿಯ (Hubballi) ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಗ್ರಾಮ ದೇವತೆಯ ದರ್ಶನ ಪಡೆದು, ಅಂಬೇಡ್ಕರ್ ಮೂರ್ತಿಗೆ ಹಾರ ಹಾಕಿದ ಸಿಎಂ ಬಳಿಕ ತಮ್ಮ ಕುಟುಂಬಸ್ಥರು ಹಾಗೂ ಮುಖಂಡರೊಡನೆ ನಾಮಪತ್ರ ಸಲ್ಲಿಕೆಗೆ ತಹಸೀಲ್ದಾರ್ ಕಚೇರಿಗೆ ತೆರಳಿದರು. ಸಿಎಂಗೆ ಬೆಂಬಲ ನೀಡಲು 50ಕ್ಕೂ ಹೆಚ್ಚು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತೆರಳಿದ್ದರು.

ಸಂಸದ ಶಿವಕುಮಾರ್ ಉದಾಸಿ, ಸಚಿವ ಸಿಸಿ ಪಾಟೀಲ್, ಸಿಎಂ ಪುತ್ರ ಭರತ್ ಬೊಮ್ಮಾಯಿ, ಶಿಗ್ಗಾಂವಿ ಕ್ಷೇತ್ರದ ಬಿಜೆಪಿ ಹಿರಿಯ ಮುಖಂಡರು ಬೊಮ್ಮಾಯಿಗೆ ಸಾಥ್ ನೀಡಿದರು. ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಕೆ ಮಾಡಿದ ಬಳಿಕ ಮಾತನಾಡಿದ ಸಿಎಂ, ಜನರು ಈ ಹಿಂದಿಗಿಂತಲೂ ಹೆಚ್ಚಿನ ಬೆಂಬಲವನ್ನು ಈ ಬಾರಿ ನೀಡುತ್ತಾರೆ. ಆಡಳಿತ ಪಕ್ಷ ಹಲವು ಹಾಲಿ ಶಾಸಕರನ್ನು ತೆಗೆದಾಗ ಬಂಡಾಯ ಸಹಜ. ಚುನಾವಣೆ ಎಂದರೆ ಕುಸ್ತಿ, ಎದುರಾಳಿ ಯಾರೇ ಬಂದರೂ ಎದುರಿಸುತ್ತೇವೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಹೊರಟು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಇಂದು ಒಳ್ಳೆಯ ಮುಹೂರ್ತ ಇದ್ದಿದ್ದರಿಂದ ಸಾಂಕೇತಿಕವಾಗಿ ಮೊದಲ ಹಂತದ ನಾಮಪತ್ರ ಸಲ್ಲಿಸಲಿದ್ದೇನೆ. ಏಪ್ರಿಲ್ 19ರಂದು ಜನ ಸೇರಿಸಿ ನಾಮಪತ್ರ ಸಲ್ಲಿಸುತ್ತೇನೆ. ಇಂದು ಇಡೀ ದಿನ ಕ್ಷೇತ್ರದಲ್ಲಿ ಇರುತ್ತೇನೆ ಎಂದು ಹೇಳಿದರು.

ರಾಜ್ಯದಲ್ಲಿ ಚುನಾವಣಾ ಕಣ ಸಿದ್ಧವಾಗಿದೆ. ನಮಗೆ ಆತ್ಮವಿಶ್ವಾಸ ಇದೆ. ಸಂಪೂರ್ಣ ಬಹುಮತ ಬರುತ್ತದೆ. ಉಳಿದ ಕ್ಷೇತ್ರಗಳಿಗೆ ಇನ್ನೆರಡು ದಿನಗಳಲ್ಲಿ ತೀರ್ಮಾನ ಆಗಲಿದೆ. 12 ಕ್ಷೇತ್ರಗಳ ಬಗ್ಗೆ ಚರ್ಚೆಯಾಗಿದೆ. ಕೇಂದ್ರ ಚುನಾವಣೆ ಸಮಿತಿ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ತೊರೆಯುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಜಗದೀಶ್ ಶೆಟ್ಟರ್ ಮನವೊಲಿಕೆ ಪ್ರಯತ್ನ ಮಾಡಿದ್ದೇವೆ. ಇವತ್ತಿಗೂ ಪ್ರಯತ್ನ ನಡೆಯುತ್ತಿದೆ. ನಿನ್ನೆ ಧರ್ಮೇಂದ್ರ ಪ್ರಧಾನ ಬಳಿ ಚರ್ಚೆ ಮಾಡಿದ್ದೇನೆ. ಶೆಟ್ಟರ್ ಜನಸಂಘ ಕಾಲದ ಮನೆತನ. ಬಿಜೆಪಿಗೆ ಶೆಟ್ಟರ್ ಅತ್ಯಂತ ನಿಷ್ಠರು. ಅವರು ಉತ್ತರ ಕರ್ನಾಟಕ ಭಾಗಕ್ಕೆ ಅತ್ಯಂತ ಅವಶ್ಯಕವಾಗಿದ್ದಾರೆ. ಅವರನ್ನು ಉಳಿಸಿಕೊಳ್ಳಬೇಕೆಂದು ಹೇಳಿದ್ದೇನೆ. ಅತ್ಯಂತ ಅವಶ್ಯ ಇರೋ ನಾಯಕನನ್ನು ಉಳಿಸಿಕೊಳ್ಳುವ ವಿಶ್ವಾಸವಿದೆ. ಈ ಕುರಿತು ಜೆಪಿ ನಡ್ಡಾ ಅವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.