IPL 2023: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ಆರ್ ಸಿಬಿ ತಂಡದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಲ್ಲಿ ಬರೆದುಕೊಂಡಿದ್ದಾರೆ.

ಈ ಬಾರಿಯ ಐಪಿಎಲ್ನಲ್ಲಿ 2ನೇ ಬಾರಿ ಸೊನ್ನೆ ಸುತ್ತುವ ಮೂಲಕ ಈ ವಿಶೇಷ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ದಿನೇಶ್ ಕಾರ್ತಿಕ್ ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲೂ ಗೋಲ್ಡನ್ ಡಕ್ ಗೆ ಔಟಾಗಿದ್ದಾರೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಬಾರಿ ಸೊನ್ನೆ ಸುತ್ತಿದ ಆಟಗಾರರ ಪಟ್ಟಿಯಲ್ಲಿ ಡಿಕೆ ಅಗ್ರಸ್ಥಾನಕ್ಕೇರಿದ್ದಾರೆ.

ಐಪಿಎಲ್ ನಲ್ಲಿ ಒಟ್ಟು 15 ಬಾರಿ ಶೂನ್ಯಕ್ಕೆ ಔಟಾಗುವ ಮೂಲಕ ದಿನೇಶ್ ಕಾರ್ತಿಕ್ ಇದೀಗ ಸೊನ್ನೆ ಸರದಾರರ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ಅದು ಕೂಡ ಜಂಟಿಯಾಗಿ ಎಂಬುದು ಇಲ್ಲಿ ಮತ್ತೊಂದು ವಿಶೇಷ. ಈ ಪಟ್ಟಿಯಲ್ಲಿ ಕೆಕೆಆರ್ ತಂಡದ ಆಟಗಾರ ಮಂದೀಪ್ ಸಿಂಗ್ ಕೂಡ ಇದ್ದು, ಐಪಿಎಲ್ನಲ್ಲಿ ಇದುವರೆಗೆ ಒಟ್ಟು 15 ಬಾರಿ ಸೊನ್ನೆಗೆ ಔಟಾಗಿದ್ದಾರೆ. ಇದೀಗ ಈ ದಾಖಲೆಯನ್ನು ಡಿಕೆ ಸರಿಗಟ್ಟಿದ್ದಾರೆ.

ಒಟ್ಟಿನಲ್ಲಿ ಕಳೆದ ಸೀಸನ್ನಲ್ಲಿ 16 ಪಂದ್ಯಗಳಲ್ಲಿ 330 ರನ್ ಬಾರಿಸಿ ಅಬ್ಬರಿಸಿದ್ದ ದಿನೇಶ್ ಕಾರ್ತಿಕ್ ಈ ಬಾರಿ ರನ್ಗಳಿಸಲು ಪರದಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ ಕಳೆದ 4 ಇನಿಂಗ್ಸ್ ಮೂಲಕ ಡಿಕೆ ಕಲೆಹಾಕಿರುವುದು ಕೇವಲ 10 ರನ್ ಮಾತ್ರ. ಅಂದರೆ ಇದುವರೆಗೆ ಎರಡಂಕಿ ಮೊತ್ತವನ್ನು ಕೂಡ ಅವರು ಗಳಿಸಿಲ್ಲ ಎಂಬುವುದು ಅಚ್ಚರಿಯ ಸಂಗತಿ.

