Lucknow : ಗ್ಯಾಂಗ್ ಸ್ಟರ್, ಮಾಫಿಯಾ ಡಾನ್, ರಾಜಕಾರಣಿ ಅತಿಕ್ ಅಹ್ಮದ್, ಸಹೋದರ ಅಶ್ರಫ್ನನ್ನು ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದಾರೆ.
ಹೀಗಾಗಿ ಉತ್ತರ ಪ್ರದೇಶದ ಎಲ್ಲ ಜಿಲ್ಲೆಗಳಲ್ಲೂ 144 ಸೆಕ್ಷನ್ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅತಿಕ್ ಅಹ್ಮದ್ ಭದ್ರತೆ ಹೊಣೆ ಹೊತ್ತಿದ್ದ 17 ಪೊಲೀಸ್ ಸಿಬ್ಬಂದಿ ಅಮಾನತುಗೊಳಿಸಿ ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ಅತಿಕ್ ಶೂಟೌಟ್ ಪ್ರಕರಣದ ಕುರಿತು ನ್ಯಾಯಾಂಗ ತನಿಖೆಗೆ ಆದೇಶ ನೀಡಿದೆ.
ಮೆಡಿಕಲ್ ಟೆಸ್ಟ್ಗೆ ಪೊಲೀಸರು ಕರೆದೊಯ್ದಿದ್ದಾಗ ಪ್ರಯಾಗ್ ರಾಜ್ ನ ಮೆಡಿಕಲ್ ಕಾಲೇಜು ಹತ್ತಿರ ಪೊಲೀಸರ ಎದುರೇ ಮೂವರು ಯುವಕರು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಹತ್ಯೆ ಮಾಡಿದ ನಂತರ ಯುವಕರು ಸ್ಥಳದಲ್ಲಿಯೇ ಪೊಲೀಸರಿಗೆ ಶರಣಾಗಿದ್ದಾರೆ. ಪೊಲೀಸರು ಗುಂಡಿಕ್ಕಿ ಹತ್ಯೆಗೈದ ಮೂವರ ಗುರುತು ಪತ್ತೆ ಹಚ್ಚಿದ್ದು ಲವಲೇಶ್ ತಿವಾರಿ, ಸನ್ನಿ, ಅರುಣ್ ಮೌರ್ಯ ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ಪೊಲೀಸರು ಅತಿಕ್ ಅಹ್ಮದ್ ಪುತ್ರನನ್ನು ಎನ್ಕೌಂಟರ್ ಮಾಡಿದ್ದರು. ಅತಿಕ್ ಅಹ್ಮದ್ ಪುತ್ರನ ಅಂತ್ಯಕ್ರಿಯೆ ನಿನ್ನೆ ನಡೆದಿತ್ತು. ಈ ಸಂದರ್ಭದಲ್ಲಿಯೇ ಯುವಕರು ಗುಂಡಿನ ದಾಳಿ ನಡೆಸಿದ್ದಾರೆ.
2006ರಲ್ಲಿ ಉಮೇಶ್ ಪಾಲ್ ಅಪಹರಣ ಪ್ರಕರಣದಲ್ಲಿ ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್ ದೋಷಿ ಎಂದು ಪ್ರಯಾಗರಾಜ್ ನ್ಯಾಯಾಲಯ ತೀರ್ಪು ನೀಡಿತ್ತು. ಉಮೇಶ್ ಪಾಲ್ ಅಪಹರಣ ಪ್ರಕರಣದಲ್ಲಿ ಅತೀಕ್ ಅಹ್ಮದ್, ಖಾನ್ ಸೌಲತ್ ಹನೀಫ್ ಮತ್ತು ದಿನೇಶ್ ಪಾಸಿ ಅವರಿಗೆ ಪ್ರಯಾಗ್ರಾಜ್ನಲ್ಲಿರುವ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಕೊಲೆ ಮತ್ತು ಅಪಹರಣ ಸೇರಿದಂತೆ ಕನಿಷ್ಠ 100 ಕ್ರಿಮಿನಲ್ ಪ್ರಕರಣಗಳನ್ನು ಮಾಜಿ ಸಂಸದ ಮತ್ತು ಶಾಸಕ ಅತೀಕ್ ಅಹ್ಮದ್ ಎದುರಿಸುತ್ತಿದ್ದಾನೆ.
ಬಹುಜನ ಸಮಾಜ ಪಕ್ಷದ ಶಾಸಕ ರಾಜು ಪಾಲ್ ಅವರ 2005 ರ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಹತ್ಯೆಯ ಒಂದು ತಿಂಗಳ ನಂತರ ಅಹ್ಮದ್ಗೆ ಶಿಕ್ಷೆಯಾಗಿತ್ತು. ಫೆಬ್ರವರಿ 24 ರಂದು ಪ್ರಯಾಗರಾಜ್ನಲ್ಲಿ ಹ್ಯುಂಡೈ ಕ್ರೆಟಾ ಎಸ್ಯುವಿಯ ಹಿಂಬದಿ ಸೀಟಿನಿಂದ ಹೊರಗಿಳಿಯುತ್ತಿದ್ದಾಗ ಉಮೇಶ್ ಪಾಲ್ನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅವರ ಜೊತೆಗಿದ್ದ ಇಬ್ಬರು ಪೊಲೀಸ್ ಅಂಗರಕ್ಷಕರೂ ಶೂಟೌಟ್ನಲ್ಲಿ ಅಸುನೀಗಿದ್ದರು.
2005 ರ ಕೊಲೆಯಲ್ಲಿ ಉಮೇಶ್ ಪಾಲ್ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಿದ್ದರಿಂದ ಅತಿಕ್ ಅಹ್ಮದ್ ಹತ್ಯೆಗೈದಿದ್ದಾನೆ ಎಂದು ಯುಪಿ ಪೊಲೀಸರು ಹೇಳಿಕೆ ನೀಡಿದ್ದರು. 2006 ರಲ್ಲಿ, ಉಮೇಶ್ ಪಾಲ್, ಪೊಲೀಸರಿಗೆ ನೀಡಿದ ಹೇಳಿಕೆಯನ್ನು ಹಿಂಪಡೆಯಲು ನಿರಾಕರಿಸಿದಾಗ ಬಂದೂಕು ತೋರಿಸಿ ಅಪಹರಿಸಿದ್ದಾರೆ ಎಂದು ಆರೋಪಿಸಿದ್ದರು.