ಪಾಗಲ್ ಪ್ರೇಮಿಯೊಬ್ಬ ಪ್ರೇಯಸಿಯ ಹುಟ್ಟು ಹಬ್ಬದಂದು ಕೇಕ್ ಕತ್ತರಿಸಿದ ನಂತರ ಆಕೆಯ ಕತ್ತು ಕೊಯ್ದ ಪ್ರಕರಣಕ್ಕೆ ಇಡೀ ರಾಜ್ಯವೇ ಬೆಚ್ಚಿ ಬಿದ್ದಿತ್ತು. ಈಗ ಈ ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರೇ ಬೆಚ್ಚಿ ಬೀಳುವಂತಹ ಸಂಗತಿಗಳು ಹೊರ ಬಿದ್ದಿವೆ.
ಪ್ರಿಯಕರ ಪ್ರಶಾಂತ್ ತನ್ನ 24 ವರ್ಷದ ಪ್ರೇಯಸಿ ನವ್ಯ ಕೊಲೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಮತ್ತಷ್ಟು ಭಯಾನಕ ಸಂಗತಿಗಳು ಬಯಲಿಗೆ ಬಂದಿವೆ. ಕೊಲೆ ಮಾಡಿದ ನಂತರ ಐದು ಗಂಟೆಗಳ ಕಾಲ ಶವದ ಜೊತೆಯೇ ಪ್ರಶಾಂತ್ ಇದ್ದ ಎನ್ನಲಾಗಿದೆ. ಕೊಲೆ ಮಾಡಿದ ನಂತರ ದೇಹವನ್ನು ಪೀಸ್ ಪೀಸ್ ಮಾಡಿ ಬಿಸಾಡಲು ಆತ ಯೋಚಿಸಿದ್ದನಂತೆ. ಹೀಗಾಗಿ ಯೂಟ್ಯೂಬ್ ನಿಂದ ವಿಡಿಯೋವನ್ನು ಕೂಡ ಆತ ನೋಡಿದ್ದ ಎನ್ನಲಾಗಿದೆ.
ಪೀಸ್ ಪೀಸ್ ಮಾಡಿದ ನಂತರ ಚೀಲದಲ್ಲಿ ಹಾಕಿಕೊಂಡು ಬಿಸಾಡಲು ಆತ ಪ್ಲ್ಯಾನ್ ಮಾಡಿದ್ದ. ಆದರೆ, ಮೃತದೇಹ ಪೀಸ್ ಪೀಸ್ ಮಾಡಲು ಮಚ್ಚು ಸಿಗದ ಹಿನ್ನೆಲೆಯಲ್ಲಿ ಆತ ಶವದೊಂದಿಗೆ 5 ಗಂಟೆಗಳ ಕಾಲ ಸಮಯ ಕಳೆದಿದ್ದಾನೆ ಎಂದು ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ.
ಸಾವಿಗೂ ಮುನ್ನ ಆರೋಪಿ ವಿರುದ್ಧ ದೂರು.
ಅಲ್ಲದೇ, ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ನವ್ಯ ಸಾಯುವುದಕ್ಕೂ ಮುನ್ನವೇ ಮೂರು ತಿಂಗಳ ಹಿಂದೆ ಯುವತಿಯ ತಾಯಿ, ಕೋರಮಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಶಾಂತ್ ನವ್ಯಗೆ ತುಂಬಾ ಕಾಟ ಕೊಡುತ್ತಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಆಗ ಪೊಲೀಸರು ಪ್ರಶಾಂತ್ ನನ್ನು ಕರೆದು ಪ್ರಶ್ನಿಸಿದಾಗ, ಇನ್ನು ಮುಂದೆ ನವ್ಯ ಸಹವಾಸಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾನೆ. ಆದರೆ, ಕೆಲವು ದಿನಗಳ ನಂತರ ಮತ್ತೆ ಇಬ್ಬರೂ ಒಂದಾಗಿದ್ದರು. ಹೀಗಾಗಿ ನವ್ಯ ಹುಟ್ಟು ಹಬ್ಬ ಆಚರಿಸಲು ಪ್ರಶಾಂತ್ ಸಿದ್ಧತೆ ಮಾಡಿಕೊಂಡಿದ್ದ. ಅವಳ ಮೇಲೆ ತನ್ನ ಪ್ರಾಣವನ್ನೇ ಇಟ್ಟುಕೊಂಡಿದ್ದೇನೆ ಎಂದು ಹೇಳಿ ಅವಳ ಉಸಿರನ್ನೇ ಈಗ ಆತ ನಿಲ್ಲಿಸಿ ಬಿಟ್ಟಿದ್ದಾನೆ.
ಪ್ರಶಾಂತ್, ನವ್ಯಳನ್ನು ಅದೆಷ್ಟು ಪ್ರೀತಿಸುತ್ತಿದ್ದ ಎಂದರೆ, ಆಕೆಯ ಹೆಸರು ಹಾಗೂ ಫೋಟೋವನ್ನು ತನ್ನ ದೇಹದ ಮೇಲೆ ಬರೆಯಿಸಿಕೊಂಡಿದ್ದ. ದೇಹದ ತುಂಬೆಲ್ಲ ಆಕೆಯ ಹೆಸರನ್ನು ಬರೆಯಿಸಿಕೊಂಡಿದ್ದ. ಅಷ್ಟೊಂದು ಪ್ರೀತಿಸುತ್ತಿದ್ದ ಈ ಪಾಗಲ್, ಕೊನೆಯ ಪ್ರೇಯಸಿಯನ್ನೇ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ತಾನೂ ಆತ್ಮಹತ್ಯೆಗೆ ಯೋಚಿಸಿದ್ದ ಎನ್ನಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.