Bangalore : ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ್(Jagadish Shettar) ಅವರು ಈಗಾಗಲೇ ಬಿಜೆಪಿ ತೊರೆಯುವುದಾಗಿ ಖಡಕ್ ಆಗಿ ಘೋಷಿಸಿದ್ದಾರೆ. 30 ವರ್ಷಗಳ ಕಾಲ ಪಕ್ಷ ಕಟ್ಟಿದ್ದ ಅವರು ಈಗ, ಪಕ್ಷದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಅವರಿಗೆ ಬಿಜೆಪಿ ಹೈಕಮಾಂಡ್ (BJP High Command) ಎರಡು ಆಫರ್ ನೀಡಿತ್ತು ಎನ್ನಲಾಗಿದೆ. ಇವುಗಳನ್ನೆಲ್ಲ ಈಗ ಶೆಟ್ಟರ್ ಧಿಕ್ಕರಿಸಿ ಸ್ವ ಪಕ್ಷಕ್ಕೆ ಸೆಡ್ಡು ಹೊಡೆದಿದ್ದಾರೆ., ತಮ್ಮ ಸ್ವಾಭಿಮಾನ ಮೆರೆದಿದ್ದಾರೆ.
ಶೆಟ್ಟರ್ ಅವರ ಮುಂದೆ ಹೈಕಮಾಂಡ್ ಬೇಡಿಕೆ ಇಟ್ಟಾಗ ಎರಡು ಆಫರ್ ಅನ್ನು ಶೆಟ್ಟರ್ ತಿರಸ್ಕರಿಸಿದ್ದು ಈ ಬಾರಿ ನಾನು ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಿಂದ (Hubblli Dharwad Central Constituency) ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಅಧಿಕೃತವಾಗಿ ಹೇಳಿದ್ದಾರೆ. ಶನಿವಾರ ರಾತ್ರಿ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಪ್ರಹ್ಲಾದ್ ಜೋಶಿ, ಸಿಎಂ ಬೊಮ್ಮಾಯಿ ಶೆಟ್ಟರ್ ನಿವಾಸಕ್ಕೆ ಆಗಮಿಸಿ ಸಂಧಾನಕ್ಕೆ ಮುಂದಾಗಿದ್ದರು. ಆದರೆ ಈ ಸಂಧಾನ ವಿಫಲವಾಗಿದ್ದು ಇಂದು ಶಿರಸಿಯಲ್ಲಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಕಚೇರಿಗೆ ತೆರಳಿ ಶೆಟ್ಟರ್ ರಾಜೀನಾಮೆ ನೀಡಲಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಬೆಳಗಾವಿಯಿಂದ (Belagavi) ಸ್ಪರ್ಧಿಸಲು ಹೈಕಮಾಂಡ್ ಆಫರ್ ನೀಡಿದೆ. ಮಂಗಳಾ ಅಂಗಡಿ ಅವರ ಸ್ಥಾನದಲ್ಲಿ ಸ್ಪರ್ಧಿಸಿದರೆ ಮುಂದಿನ ಸರ್ಕಾರದಲ್ಲಿ ಕೇಂದ್ರ ಸಚಿವ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು ಎಂದು ತಿಳಿದು ಬಂದಿದೆ. ಅಲ್ಲದೇ, ಕುಟುಂಬದ ವ್ಯಕ್ತಿಗೆ ಈ ಬಾರಿ ವಿಧಾನಸಭಾ ಟಿಕೆಟ್ ನೀಡಲಾಗುವುದು ಎಂದು ತಿಳಿಸಲಾಗಿತ್ತು. ಈ ಎರಡು ಆಫರ್ಗಳನ್ನು ನಯವಾಗಿಯೇ ಶೆಟ್ಟರ್ ತಿರಸ್ಕರಿಸಿದ್ದು, ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಯೇ ಮಾಡುತ್ತೇನೆ ಎಂದು ಹೇಳಿ ಬಂಡಾಯ ಎದ್ದಿದ್ದಾರೆ.
ಎರಡ್ಮೂರು ತಿಂಗಳ ಹಿಂದೆಯೇ ನನಗೆ ಹೇಳಿದ್ದರೆ ನಾನು ನಾನು ಮಾನಸಿಕವಾಗಿ ಸಿದ್ಧನಾಗಿ ಇರುತ್ತಿದ್ದೆ. ಆದರೆ ಈ ಚುನಾವಣೆಗೆ ನಾನು ಈಗಾಗಲೇ ಸಿದ್ಧತೆ ನಡೆಸಿದ್ದೇನೆ. ಈ ಕಾರಣಕ್ಕೆ ನಾನು ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಕಳೆದ ಮೂರು ತಿಂಗಳಿಂದ ನನ್ನ ವಿರುದ್ಧ ಅಪಪ್ರಚಾರ ಕಾರ್ಯ ನಡೆಯುತ್ತಿದೆ.ಪಕ್ಷ ನಮ್ಮನ್ನು ಯೂಸ್ ಆಂಡ್ ಥ್ರೊ ಮಾಡಿದ್ದು ನನ್ನನ್ನು ತುಳಿಯುವ ಹುನ್ನಾರ, ಷಡ್ಯಂತ್ರ ಮಾಡಿದೆ. ಮೊದಲಿನ ಬಿಜೆಪಿ ಈಗ ಉಳಿದಿಲ್ಲ. ನನಗೆ ಟಿಕೆಟ್ ನಿರಾಕರಿಸಲು ಯಾವುದಾದರೂ ಒಂದು ಬಲವಾದ ಕಾರಣ ನೀಡಲಿ. ನನ್ನ ಕುಟುಂಬದವರಿಗೆ ಟಿಕೆಟ್ ಸಿಗುತ್ತದೆಯಂತೆ. ನಾನು ಹೇಳಿದ ವ್ಯಕ್ತಿಗೆ ಟಿಕೆಟ್ ಕೊಡುತ್ತಾರಂತೆ. ಆದರೆ ನಾನು ವಿಧಾನಸಭೆಗೆ ಹೋಗಬಾರದು ಎಂದರೆ ಹೇಗೆ? ಈ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ. ನನ್ನ ಹಿತೈಷಿಗಳ ಜೊತೆ ಸೇರಿ ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.