Bidar : ಬಿಜೆಪಿಯ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಪಕ್ಷದಲ್ಲಿ ಭಿನ್ನಮತ ಸ್ಫೋಟವಾಗುತ್ತಲೇ ಇದೆ. ಈಗಾಗಲೇ ಹಲವು ಹಿರಿಯ ನಾಯಕರು ಬಿಜೆಪಿ ವಿರುದ್ಧ ಮುನಿಸಿಕೊಂಡು ಪಕ್ಷ ತೊರೆದಿದ್ದಾರೆ. ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಸೇರಿದಂತೆ ಹಲವರು ಪಕ್ಷ ತೊರೆದಿದ್ದಾರೆ. ಇದರ ಬೆನ್ನಲ್ಲಿಯೇ ಮತ್ತೊಬ್ಬ ಹಿರಿಯ ನಾಯಕ ಪಕ್ಷ ತೊರೆದಿದ್ದಾರೆ.

ಟಿಕೆಟ್ ಸಿಗದಕ್ಕೆ ಬಿಜೆಪಿ (BJP) ವಿರುದ್ಧ ಮುನಿಸಿಕೊಂಡಿರುವ ಹಾಲಿ ಶಾಸಕ ಸೂರ್ಯಕಾಂತ ನಾಗಮಾರಪಳ್ಳಿ (Suryakanth Nagamarapalli) ಪಕ್ಷ ತೊರೆದು ಜೆಡಿಎಸ್ ಸೇರಲು ಮುಂದಾಗಿದ್ದಾರೆ. ಅವರು ಈಗಾಗಲೇ ದಳ ನಾಯಕರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಇಂದು ಅಥವಾ ಸೋಮವಾರ ಜೆಡಿಎಸ್ (JDS) ಸೇರುವ ಸಾಧ್ಯತೆಯಿದೆ. ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಚಿಹ್ನೆಯ ಜೊತೆ ಸೂರ್ಯಕಾಂತ ಅವರ ಫೋಟೋಗಳನ್ನು ಅಭಿಮಾನಿಗಳು ಈಗಾಗಲೇ ಹಾಕುತ್ತಿದ್ದಾರೆ.

ಬೀದರ್ ವಿಧಾನಸಭಾ ಕ್ಷೇತ್ರದ ಟಿಕೆಟ್ ಸಿಗದಿದ್ದಕ್ಕೆ ನಾಗಮಾರಪಳ್ಳಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆರಂಭದಲ್ಲಿ ನಾಗಮಾರಪಳ್ಳಿ ಮುಂದಾಗಿದ್ದರು. ಚೀಟಿ ಸಂಗ್ರಹದಲ್ಲಿ ಬಹುತೇಕ ಬೆಂಬಲಿಗರು ಜೆಡಿಎಸ್ ಸೇರಿ ಎಂದಿದ್ದರು. ಬೆಂಬಲಿಗರ ಅಭಿಪ್ರಾಯದಂತೆ ಸೂರ್ಯಕಾಂತ ನಾಗಮಾರಪಳ್ಳಿ ಜೆಡಿಎಸ್ ಸೇರ್ಪಡೆಯಾಗುವ ಸಾಧ್ಯತೆಯಿದೆ. ಸಾಮಾನ್ಯ ಕಾರ್ಯಕರ್ತನಾಗಿ 35 ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಈಶ್ವರ್ ಸಿಂಗ್ ಅವರಿಗೆ ಈ ಬಾರಿ ಬಿಜೆಪಿ ಮಣೆ ಹಾಕಿದೆ.