Chennai: ದಲಿತ ಯುವತಿಯನ್ನು ಮದುವೆಯಾಗಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ತನ್ನ ಮಗನನ್ನು ಕೊಲೆ ಮಾಡಿ, ರಕ್ಷಣೆಗೆ ಬಂದಿದ್ದ ತಾಯಿಯನ್ನೂ ಹತ್ಯೆ ಮಾಡಿರುವ ಘಟನೆ ಕೃಷ್ಣಗಿರಿ ಜಿಲ್ಲೆಯ ಉತ್ತಂಗರೈ ಬಳಿ ನಡೆದಿದೆ.
ಪಿ ದಂಡಪಾಣಿ ಆರೋಪಿ ಎಂದು ಗುರುತಿಸಲಾಗಿದ್ದು, ಆತ ತಿರುಪ್ಪೂರ್ ನ ಹೋಸೈರಿ ಘಟಕದಲ್ಲಿ ಕೆಲಸ ಮಾಡುತ್ತಿದ್ದ. ದಂಡಪಾಣಿಯ 25 ವರ್ಷದ ಮಗ, ಸುಭಾಷ್ ಕೂಡ ಅಲ್ಲಿಯೇ ಕೆಲಸ ಮಾಡುತ್ತಿದ್ದ. ಸುಭಾಷ್ ಅರಿಯಾಲೂರು ಮೂಲದ 24 ವರ್ಷದ ದಲಿತ ಯುವತಿ ಮತ್ತು ಸಹೋದ್ಯೋಗಿ ಅನುಷಾಳನ್ನು ಪ್ರೀತಿಸುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಅವರಿಬ್ಬರು ಮದುವೆಯಾಗಿದ್ದು, ಮದುವೆಯ ನಂತರ ದಂಪತಿಗಳು ತಿರುಪತ್ತೂರಿನಲ್ಲಿ ನೆಲೆಸಿದ್ದರು. ಮಗ ದಲಿತ ಯುವತಿಯನ್ನು ಮದುವೆಯಾಗುವುದನ್ನು ದಂಡಪಾಣಿ ವಿರೋಧಿಸಿದ್ದರು. ಕಳೆದ ವಾರ ಕೃಷ್ಣಗಿರಿ ಜಿಲ್ಲೆಯ ಅರುಣಾಪತಿ ಎಂಬ ತಮ್ಮ ಗ್ರಾಮಕ್ಕೆ ಮರಳಿದರು. ಅಲ್ಲಿ ಅವರ ತಾಯಿ ಕನ್ನಮ್ಮಾಳ್ ವಾಸಿಸುತ್ತಿದ್ದರು. ಯುವ ದಂಪತಿಗಳನ್ನು ಗ್ರಾಮಕ್ಕೆ ಆಹ್ವಾನಿಸಿ ಮಾತುಕತೆ ನಡೆಸಿ ರಾಜಿ ಮಾಡಿಕೊಳ್ಳುವಂತೆ ತಾಯಿಗೆ ದಂಡಪಾಣಿ ಹೇಳಿದ್ದರು.
ಸುಭಾಷ್ ತನ್ನ ಅಜ್ಜಿಯನ್ನು ಭೇಟಿಯಾಗಲು ಇತ್ತೀಚೆಗೆ ತನ್ನ ಹೆಂಡತಿಯೊಂದಿಗೆ ಗ್ರಾಮಕ್ಕೆ ಬಂದಿದ್ದ. ಈ ಸಂದರ್ಭದಲ್ಲಿ ಆತನ ಅಜ್ಜಿ, ಸ್ಪಷ್ಟವಾಗಿ, ಸುಬಾಷ್ ನನ್ನು ಬೆಂಬಲಿಸಿದ್ದರು. ಈ ಸಂದರ್ಭದಲ್ಲಿಯೇ ಈ ಘಟನೆ ನಡೆದಿದೆ ಎನ್ನಲಾಗಿದೆ. ಶನಿವಾರ ಬೆಳಗಿನ ಜಾವ, ಮಗನ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ. ಮೊಮ್ಮಗನ ಕಿರುಚಾಟ ಕೇಳಿ ರಕ್ಷಿಸಲು ಯತ್ನಿಸಿದ ತಾಯಿಯ ಮೇಲೂ ಹಲ್ಲೆ ನಡೆಸಿದ್ದಾನೆ. ತನ್ನ ಸೊಸೆಯ ಮೇಲೂ ಹಲ್ಲೆ ನಡೆಸಿದ್ದಾನೆ. ಆದರೆ ವಧು ಗಾಯಗಳಿಂದ ಪಾರಾಗಿದ್ದಾಳೆ.
ನೆರೆಯ ಜನ ಸುಬಾಷ್, ಆತನ ಪತ್ನಿ ಮತ್ತು ಅಜ್ಜಿಯನ್ನು ಉತ್ತಂಗರೈನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಸುಬಾಷ್ ಮತ್ತು ಕನ್ನಮ್ಮಾಳ್ ಮೃತಪಟ್ಟಿರುವುದಾಗಿ ಎಂದು ವೈದ್ಯರು ಘೋಷಿಸಿದರು. ಪೊಲೀಸರು ದಂಡಪಾಣಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆತನ ಪತ್ತೆಗೆ ಬಲೆ ಬೀಸಿದ್ದಾರೆ.