Ahmedabad : ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ನಡೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ (Sanju Samson), ಶಿಮ್ರಾನ್ ಹೆಟ್ಮೇಯರ್ (Shimron Hetmyer) ಭರ್ಜರಿ ಪ್ರದರ್ಶನದಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡವು 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.
ಆರಂಭದ 10 ಓವರ್‌ಗಳಲ್ಲಿ ಕೇವಲ 53 ರನ್ ಗಳಿಸಿದ್ದ ರಾಜಸ್ಥಾನ್ (Rajasthan Royals) ತಂಡವು ಮುಂದಿನ 56 ಎಸೆತಗಳಲ್ಲಿ ಬರೋಬ್ಬರಿ 126 ರನ್ ಸಿಡಿಸಿತು. ಕೊನೆಯ 6 ಓವರ್‌ಗಳಲ್ಲಿ ತಂಡದ ಗೆಲುವಿಗೆ 64 ರನ್‌ಗಳ ಅಗತ್ಯವಿತ್ತು. ಈ ಸಂದರ್ಭದಲ್ಲಿ 15ನೇ ಓವರ್‌ನಲ್ಲಿ 13 ರನ್, 16ನೇ ಓವರ್‌ನಲ್ಲಿ 20 ರನ್, 17ನೇ ಓವರ್‌ನಲ್ಲಿ 8 ರನ್, 18ನೇ ಓವರ್‌ನಲ್ಲಿ 13 ರನ್ ಹಾಗೂ 19ನೇ ಓವರ್‌ನಲ್ಲಿ 16 ರನ್ ಸೇರಿಸಿತು. ಹೀಗಾಗಿ ಕೊನೆಯ ಓವರ್‌ನಲ್ಲಿ 7 ರನ್‌ಗಳು ಬೇಕಿದ್ದಾಗ ಮೊದಲ ಎಸೆತದಲ್ಲಿ 2 ರನ್ ಕದ್ದ ಹೆಟ್ಮೇಯರ್ ರನೌಟ್‌ನಿಂದ ಪಾರಾದರು. 2ನೇ ಎಸೆತದಲ್ಲಿಯೇ ಸಿಕ್ಸರ್ ಚಚ್ಚಿ ತಂಡ ರೋಚಕ ಜಯ ಸಿಗುವಂತೆ ಮಾಡಿದರು.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತ್ತು. 178 ರನ್‌ಗಳ ಗುರಿ ಬೆನ್ನತ್ತಿದ್ದ ರಾಜಸ್ಥಾನ್ ರಾಯಲ್ಸ್ 19.2 ಓವರ್‌ಗಳಲ್ಲೇ 179 ರನ್ ಗಳಿಸಿ ಗುಜರಾತ್ ತವರಿನಲ್ಲೇ ಗೆದ್ದು ಬೀಗಿತು. ಚೇಸಿಂಗ್ ಆರಂಭಿಸಿದ ರಾಜಸ್ಥಾನ್ ರಾಯಲ್ಸ್ ಆರಂಭದಲ್ಲೇ ಆಘಾತ ಎದುರಿಸಿತು. ಆರಂಭಿಕರಾದ ಯಶಸ್ವಿ ಜೈಸ್ವಾಲ್ 1 ರನ್ ಗಳಿಸಿದರೆ, ಜೋಸ್ ಬಟ್ಲರ್ ಶೂನ್ಯಕ್ಕೆ ಔಟಾಗಿ ಪೆವಿಲಿಯನ್ ಸೇರಿದರು. ಇದರಿಂದ ಮೊದಲ 6 ಓವರ್‌ಗಳಲ್ಲಿ ಕೇವಲ 26 ರನ್ ಕಲೆಹಾಕಿತ್ತು. 3ನೇ ಕ್ರಮಾಂಕದಲ್ಲಿ ಬಂದ ದೇವದತ್ ಪಡಿಕಲ್ ಕೂಡ 25 ಎಸೆತಗಳಲ್ಲಿ 26 ರನ್, ರಿಯಾನ್ ಪರಾಗ್ 5 ರನ್ ಗಳಿಸಿ ಔಟಾದರು.
32 ಎಸೆತಗಳನ್ನು ಎದುರಿಸಿದ ಸಂಜು ಬರೋಬ್ಬರಿ 6 ಸಿಕ್ಸರ್, 3 ಬೌಂಡರಿಗಳೊಂದಿಗೆ 60 ರನ್ ಗಳಿಸಿದರು. ಈ ಸಂದರ್ಭದಲ್ಲಿ ಕ್ಯಾಚ್ ನೀಡಿ ಮರಳಿದರು. ಅಬ್ಬರ ನಿಲ್ಲಿಸದ ಹೆಟ್ಮೇಯರ್ ಸ್ಫೋಟಕ ಅರ್ಧಶತಕದೊಂದಿಗೆ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು. ಕೇವಲ 25 ಎಸೆತಗಳನ್ನು ಎದುರಿಸಿದ ಹೆಟ್ಮೇಯರ್ 5 ಸಿಕ್ಸರ್, 2 ಬೌಂಡರಿಯೊಂದಿಗೆ 56 ರನ್ ಚಚ್ಚಿ ಅಜೇಯರಾಗುಳಿದರು. ರಾಜಸ್ಥಾನ್ ಪರ ಸಂದೀಪ್ ಶರ್ಮಾ 2 ವಿಕೆಟ್, ಟ್ರೆಂಟ್ ಬೋಲ್ಟ್, ಆಡಂ ಜಂಪಾ ಹಾಗೂ ಚಾಹಲ್ ತಲಾ ಒಂದೊಂದು ವಿಕೆಟ್ ಪಡೆದರು.