Bangalore : ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು ಕೊನೆಗೂ ಇಷ್ಟು ವರ್ಷ ದುಡಿದ ಪಕ್ಷ ಬಿಟ್ಟು, ಕಾಂಗ್ರೆಸ್ ಸೇರಿದ್ದಾರೆ. ಇಂದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ‘ಕೈ’ ಬಾವುಟ ಹಿಡಿದಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶೆಟ್ಟರ್ ಕಾಂಗ್ರೆಸ್ ಸೇರಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಶೆಟ್ಟರ್ಗೆ ಪಕ್ಷದ ಶಾಲು ಹೊದಿಸಿ, ಬಾವುಟ ನೀಡಿ ಪಕ್ಷಕ್ಕೆ ಸ್ವಾಗತಿಸಿದರು.
ಬಿಜೆಪಿ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಶೆಟ್ಟರ್ ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದರು. ಬಿಜೆಪಿ ಹಿರಿಯ ನಾಯಕರು ಮನವೊಲಿಸಲು ಎಷ್ಟೇ ಪ್ರಯತ್ನ ಮಾಡಿದರೂ ಅವರು ಸುಮ್ಮನಾಗಲಿಲ್ಲ. ಕೊನೆಗೆ ಭಾನುವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನಂತರ ಬೆಂಗಳೂರಿಗೆ ಆಗಮಿಸಿದ್ದ ಶೆಟ್ಟರ್ರನ್ನು ಕಾಂಗ್ರೆಸ್ ನಾಯಕರು ತಡರಾತ್ರಿ ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದರು. ಕಾಂಗ್ರೆಸ್ ಸೇರುವಂತೆ ಮನವೊಲಿಸಿದರು. ಈ ಎಲ್ಲ ಬೆಳವಣಿಗೆಯು ಶೆಟ್ಟರ್ ಅವರು ಕಾಂಗ್ರೆಸ್ ಸೇರುವುದು ಗ್ಯಾರಂಟಿ ಎನ್ನಲಾಗುತ್ತಿತ್ತು.
ಈ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಇದ್ದರು.