Hubli : ಹಿರಿಯ ನಾಯಕ ಜಗದೀಶ್ ಶೆಟ್ಟರ್ (Jagadish Shettar)ಅವರು ಬಿಜೆಪಿ (BJP) ತೊರೆದು ಕಾಂಗ್ರೆಸ್ (Congress) ಸೇರಿದ್ದು, ಹುಬ್ಬಳ್ಳಿಯಲ್ಲಿರುವ (Hubballi) ನಿವಾಸಕ್ಕೆ ಆಗಮಿಸುತ್ತಿದ್ದಂತೆ ಅವರ ಪತ್ನಿ ಶಿಲ್ಪಾ ಜಗದೀಶ್ (Shilpa Jagadish) ತಬ್ಬಿ ಕಣ್ಣೀರಿಟ್ಟಿದ್ದಾರೆ.
ಶೆಟ್ಟರ್ ಹುಬ್ಬಳ್ಳಿಯ ಮಧುರಾ ಎಸ್ಟೇಟ್ನಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಇಷ್ಟು ದಿನ ಬಿಜೆಪಿ ಘೋಷಣೆ ಕೂಗುತ್ತಿದ್ದ ಬೆಂಗಲಿಗರು ಇಂದು ಕಾಂಗ್ರೆಸ್ ಘೋಷಣೆ ಕೂಗಿದ್ದಾರೆ. ಈ ಸಂದರರ್ಭದಲ್ಲಿ ಭಾವುಕರಾದ ಶೆಟ್ಟರ್ ಪತ್ನಿ ಶಿಲ್ಪಾ ಜಗದೀಶ್ ಪತಿಯನ್ನು ತಬ್ಬಿ ಕಣ್ಣೀರು ಹಾಕಿದರು. ಪತ್ನಿಗೆ ಸಮಾಧಾನಪಡಿಸಲು ಮುಂದಾದ ಶೆಟ್ಟರ್ ಕೂಡಾ ಈ ವೇಳೆ ಗದ್ಗದಿತರಾದರು. ಇಬ್ಬರು ಕಣ್ಣೀರು ಹಾಕಿದ್ದನ್ನು ನೋಡಿದ ಶೆಟ್ಟರ್ ಬೆಂಬಲಿಗರು ಕೂಡ ಕಣ್ಣೀರು ಸುರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಜಗದೀಶ ಶೆಟ್ಟರ್, ನಾನು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. ಕಳೆದ ಹಲವಾರು ತಿಂಗಳುಗಳಿಂದ ನನಗೆ ತೊಂದರೆ ಕೊಡುವ ಕೆಲಸವನ್ನು ಪಕ್ಷದ ಹಲವರು ಮಾಡಿದ್ದಾರೆ. ನನಗೆ ಬಿಜೆಪಿಯಲ್ಲಿ ಅಪಮಾನ ಆಗುವ ರೀತಿ ನಡೆದುಕೊಂಡಿದ್ದಾರೆ. ಹೀಗಾಗಿ ಮನನೊಂದು ಕಾಂಗ್ರೆಸ್ ಸೇರ್ಪಡೆ ಆಗಿದ್ದೇನೆ ಎಂದು ತಿಳಿಸಿದರು.
ನನಗೆ ಬಿಜೆಪಿ ಪಕ್ಷ ಬಿಡುವ ಆಸೆ ಎಂದೂ ಇರಲಿಲ್ಲ. ಆದರೆ ನನ್ನ ಮನೆಯಿಂದ ಹೊರ ಹಾಕುವ ಪ್ರಯತ್ನ ಆಗಿತ್ತು. ನಾನು ಕಾಂಗ್ರೆಸ್ಗೆ ಯಾವುದೇ ಕರಾರು ಹಾಕಿಲ್ಲ. ನನ್ನನ್ನು ಗೌರವದಿಂದ ನೋಡಿಕೊಂಡರೆ ಸಾಕು ಎಂದು ಹೇಳಿದ್ದೇನೆ. ನನಗೆ ಕಾಂಗ್ರೆಸ್ ನಾಯಕರು ಹೃದಯಸ್ಪರ್ಶಿ ಸ್ವಾಗತ ಮಾಡಿದ್ದಾರೆ. ನಾನು ಬಿಜೆಪಿಯನ್ನು ಬೈಯಲ್ಲ. ಕೆಲವೊಂದು ನಾಯಕರ ಹಿಡಿತದಲ್ಲಿ ಬಿಜೆಪಿ ಇದೆ. ಏಪ್ರಿಲ್ 19ರಂದು ನಾನು ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಅಂದು ದೊಡ್ಡ ಪ್ರಮಾಣದ ಜನರು ಬರುತ್ತಾರೆ. 8 ರಿಂದ 10 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.