Sudan: ಸುಡಾನ್‌ನಲ್ಲಿ (Sudan) ಸೇನೆ (Army) ಮತ್ತು ಅರೆ ಸೇನಾಪಡೆಗಳ (Paramilitary) ನಡುವೆ ಸಂಘರ್ಷ ನಡೆಯುತ್ತಿದ್ದು, ಕಳೆದ 3 ದಿನಗಳಿಂದ ನಡೆಯುತ್ತಿದ್ದು, ಪರಿಸ್ಥಿತಿ ತೀವ್ರಗೊಂಡಿದೆ. ಈ ಘಟನೆಯಲ್ಲಿ (Conflict) ಸುಮಾರು 200 ಜನರು ಸಾವನ್ನಪ್ಪಿದ್ದು, 1,800ಕ್ಕೂ ಅಧಿಕ ಜನರು ಘಟನೆಯಲ್ಲಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಅಲ್ಲಿಯ ರಾಜಧಾನಿ ಖಾರ್ಟೂಮ್‌ನಲ್ಲಿ (Khartoum) ಸೇನೆ ಹಾಗೂ ಅರೆಸೈನಿಕ ಪಡೆಯ ನಡುವೆ ಅಧಿಕಾರಕ್ಕೆ ಸಂಬಂಧಪಟ್ಟಂತೆ ಶನಿವಾರ ಸಂಘರ್ಷ ಉಂಟಾಗಿದೆ. ಮಿಲಿಟರಿ ಆಡಳಿತದ ವಿರುದ್ಧ ಅರೆಸೇನಾಪಡೆ ದಂಗೆ ಎದ್ದಿದ್ದು, ಖಾರ್ಟೂಮ್ ನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಅಧ್ಯಕ್ಷರ ನಿವಾಸವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿತ್ತು. ಈ ಹಿನ್ನೆಲೆಯಲ್ಲಿ ಎರಡೂ ಕಡೆ ಗುಂಡಿನ ಚಕಮಕಿ ನಡೆದಿದ್ದು, ಇದು ತೀವ್ರ ಸ್ವರೂಪ ಪಡೆದಿದೆ.
3 ದಿನಗಳಿಂದ ನಡೆಯುತ್ತಿರುವ ಈ ಸಂಘರ್ಷದಿಂದಾಗಿ ಒಂಡರ್ಮನ್ ನಗರ, ದಕ್ಷಿಣ ಡಾರ್ಫರ್, ನ್ಯಾಲಾ, ರಾಜಧಾನಿ ಖಾರ್ಟೂಮ್ ಸೇರಿದಂತೆ ವಿವಿಧ ನಗರಗಳು ನಲುಗಿ ಹೋಗಿವೆ. ಅಲ್ಲಲ್ಲಿ ಸೇನೆ ಹಾಗೂ ಅರೆಸೇನಾ ಪಡೆ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.