IPL 2023: ಐಪಿಎಲ್ 24ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 8 ರನ್ ಗಳ ರೋಚಕ ಗೆಲುವು ಸಾಧಿಸಿದೆ. ಇದರ ಬೆನ್ನಲ್ಲಿಯೇ ಆರ್‌ಸಿಬಿ ತಂಡಕ್ಕೆ ಮತ್ತೊಂದು ಆಘಾತ ಸಿಕ್ಕಿದ್ದು, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ ದಂಡ ವಿಧಿಸಲಾಗಿದೆ.

ನಿನ್ನೆ ನಡೆದ ಸಿಎಸ್‌ಕೆ ವಿರುದ್ದದ ಪಂದ್ಯದಲ್ಲಿ ಐಪಿಎಲ್ ಕೋಡ್ ಆಫ್ ಕಂಡಕ್ಟ್ ಅನ್ನು ಉಲ್ಲಂಘಿಸಿದ್ದಾರೆ ಎಂದು ವಿರಾಟ್ ಕೊಹ್ಲಿ ಪಂದ್ಯದ ಶುಲ್ಕದ ಶೇಕಡಾ 10 ರಷ್ಟು ದಂಡ ವಿಧಿಸಲಾಗಿದೆ. ಐಪಿಎಲ್ ಕೋಡ್ ಆಫ್ ಕಂಡಕ್ಟ್ ಆರ್ಟಿಕಲ್ ಅಡಿಯಲ್ಲಿ ಮೊದಲನೇ ಹಂತದ ಅಪರಾಧ ಮಾಡಿರುವುದಾಗಿ ವಿರಾಟ್ ಕೊಹ್ಲಿ ಒಪ್ಪಿಕೊಂಡಿದ್ದಾರೆ. ಪಂದ್ಯದ ರೆಫರಿ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮವಾಗಿದೆ. ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಮೈದಾನದಲ್ಲಿ ಮಿತಿ ಮೀರಿದ ಸಂಭ್ರಮಾಚರಣೆ ಮಾಡಿದ್ದಕ್ಕೆ ಅವರಿಗೆ ದಂಡ ವಿಧಿಸಲಾಗಿದೆ.

ಕೊಹ್ಲಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಹೆಚ್ಚಿನ ರನ್ ಗಳಿಸಲು ಸಾಧ್ಯವಾಗಲಿಲ್ಲ, 4 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿ ಔ ಟ್ ಆದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸಿಎಸ್‌ಕೆ ಆರಂಭದಲ್ಲೇ ರುತುರಾಜ್ ಅವರ ವಿಕೆಟ್ ಕಳೆದುಕೊಂಡಿತು. 6 ಎಸೆತಗಳಲ್ಲಿ ಕೇವಲ ಮೂರು ರನ್ ಗಳಿಸಿ ಮೊಹಮ್ಮದ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಬೃಹತ್ ಮೊತ್ತವನ್ನು ಬೆನ್ನತ್ತಿದ ಆರ್ ಸಿಬಿ ಆರಂಭದಲ್ಲೇ ಕೊಹ್ಲಿ, ಮಹಿಪಾಲ್ ಲೊಮ್ರೊರ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಮ್ಯಾಕ್ಸ್‌ವೆಲ್ ಅಬ್ಬರದ ಬ್ಯಾಟಿಂಗ್ ಮಾಡಿದರು. ಈ ಜೋಡಿ ಮೂರನೇ ವಿಕೆಟ್‌ಗೆ 62 ಎಸೆತಗಳಲ್ಲಿ 126 ರನ್ ಗಳಿಸಿದರು. ಮ್ಯಾಕ್ಸ್‌ವೆಲ್ 36 ಎಸೆತಗಳಲ್ಲಿ 3 ಬೌಂಡರಿ 8 ಸಿಕ್ಸರ್ ಸಹಿತ 76 ರನ್ ಗಳಿಸಿದರು, ಫಾಫ್ ಡು ಪ್ಲೆಸಿಸ್ 33 ಎಸೆತಗಳಲ್ಲಿ 5 ಬೌಂಡರಿ 4 ಸಿಕ್ಸರ್ ಸಹಿತ 62 ರನ್ ಗಳಿಸಿದರು. ಅಂತಿಮವಾಗಿ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 218 ರನ್ ಗಳಿಸುವ ಮೂಲಕ 8 ರನ್‌ಗಳಿಂದ ಸೋಲನುಭವಿಸಿತು.