Bangalore : ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು (Jagadish Shettar) ಬಿಎಲ್ ಸಂತೋಷ್ (BL Santosh) ವಿರುದ್ಧ ಮಾತನಾಡಿರುವುದು ತಪ್ಪು. ಅವರಿಗೆ ಇದು ಶೋಭೆ ತರುವುದಿಲ್ಲ. ಅವರಿಗೆ ಸಂತೋಷ್‌ರಿಂದ ಟಿಕೆಟ್ ತಪ್ಪಿದ್ದು ಎಂಬ ಮಾತು ಸುಳ್ಳು ಎಂದು ಯಡಿಯೂರಪ್ಪ (BS Yediyurappa) ಕಿಡಿಕಾರಿದ್ದಾರೆ.
ಜಗದೀಶ್ ಶೆಟ್ಟರ್‌ಗೆ ಎಲ್ಲ ರೀತಿಯಲ್ಲಿ ಮನವೊಲಿಸುವ ಕಾರ್ಯ ಮಾಡಲಾಗಿತ್ತು. ಆದರೆ ಅಂತಿಮವಾಗಿ ಪಕ್ಷ ಬಿಟ್ಟು ಹೋದರು. ಅವರು ಪಕ್ಷ ಬಿಟ್ಟಿರುವುದರಿಂದಾಗಿ ನಮಗೆ ಯಾವುದೇ ತೊಂದರೆಯಾಗುವುದಿಲ್ಲ. ಶೆಟ್ಟರ್ ನಂಬಿ ಅವರ ಜೊತೆಗೆ ಯಾವ ಕಾರ್ಯಕರ್ತರೂ ಹೋಗಿಲ್ಲ. ಅವರಿಗೆ ಟಿಕೆಟ್ ಸಿಗದಿರುವುದಕ್ಕೆ ಯಾರೂ ಕಾರಣರಲ್ಲ. ಸುಮ್ಮನೆ ಸಂತೋಷ್ ಹೆಸರು ತಂದಿದ್ದು ಕೂಡಾ ಶೆಟ್ಟರ್‌ಗೆ ಶೋಭೆ ತರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಶೆಟ್ಟರ್ ಈ ರೀತಿಯ ಕೆಟ್ಟ ನಿರ್ಧಾರ ಮಾಡಬಾರದಿತ್ತು. ನಾವು ಎಷ್ಟೇ ಮನವಿ ಮಾಡಿದರೂ ಅವರು ಒಪ್ಪಲಿಲ್ಲ. ಅವರನ್ನು ರಾಜ್ಯಸಭೆ ಸದಸ್ಯರಾಗಿ ಮಾಡುತ್ತೇವೆ ಎಂದು ಹೇಳಿದ್ದೇವು. ಈಗ ಅವರು ಹೋಗಿರುವುದರಿಂದ ನಮಗೇನೂ ನಷ್ಟವಿಲ್ಲ. ಇನ್ಮೇಲೆ ಅವರ ದಾರಿ ಅವರಿಗೆ ನಮ್ಮ ದಾರಿ ನಮಗೆ. ಬಿಜೆಪಿ ಬಹುಮತ ಪಡೆದುಕೊಂಡು ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದಾರೆ.
ಶಿವಮೊಗ್ಗ ಟಿಕೆಟ್ ಘೋಷಣೆ ಬಾಕಿ ಇರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶಿವಮೊಗ್ಗದ ಟಿಕೆಟ್ ಅನ್ನು ಇಂದು ಘೋಷಣೆ ಮಾಡುತ್ತೇವೆ. ಶಿಕಾರಿಪುರದಿಂದ ವಿಜಯೇಂದ್ರ ಬುಧವಾರ ನಾಮಪತ್ರ ಸಲ್ಲಿಕೆ ಮಾಡುತ್ತಾರೆ. ನಾಮಪತ್ರ ಸಲ್ಲಿಸಿದ ನಂತರ ಪ್ರಚಾರ ಆರಂಭಿಸುತ್ತೇವೆ ಎಂದು ಹೇಳಿದ್ದಾರೆ.