Shivamogga : ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Elections 2023) ಬಿರುಸುಗೊಂಡಿದ್ದು, ಎಲ್ಲ ಪಕ್ಷಗಳಲ್ಲಿಯೂ ಟಿಕೆಟ್ ಹಂಚಿಕೆ ಕುರಿತು ಅಸಮಾಧಾನ ಭುಗಿಲೆದ್ದಿದೆ. ಬಿಜೆಪಿಯಲ್ಲಿಯಂತೂ ಈ ತಲೆನೋವು ಹೆಚ್ಚಾಗುತ್ತಿದೆ. ಟಿಕೆಟ್ ಕೈತಪ್ಪಿದ್ದರಿಂದ ಒಬ್ಬೊಬ್ಬರೇ ಪ್ರಭಾವಿ ನಾಯಕರು ಪಕ್ಷದ ಬಾಗಿಲು ಮುಚ್ಚುತ್ತಿದ್ದಾರೆ. ಸದ್ಯ ಈ ಸಾಲಿಗೆ ಶಿವಮೊಗ್ಗದ(Shivamogga) ಆಯನೂರು ಮಂಜುನಾಥ್(Ayanur Manjunath) ಸೇರಿದ್ದಾರೆ.
ಅವರು ವಿಧಾನಪರಿಷತ್ ಸ್ಥಾನಕ್ಕೆ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಆಯನೂರು ಮಂಜುನಾಥ್ ಶಿವಮೊಗ್ಗ ನಗರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಬಿಜೆಪಿಯು ಇನ್ನೂ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಆದರೂ ಟಿಕೆಟ್ ಸಿಗುವುದು ಖಚಿತ ಇಲ್ಲದ ಹಿನ್ನೆಲೆಯಲ್ಲಿ ರಾಜೀನಾಮೆ ಘೋಷಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ಘೋಷಿಸಿರುವ ಅವರು, ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದೇನೆ. ಇಂದು ಮಧ್ಯಾಹ್ನ ಹುಬ್ಬಳ್ಳಿಗೆ ತೆರಳಿ ಸಭಾಪತಿಗಳನ್ನು ಭೇಟಿಯಾಗಿ ರಾಜೀನಾಮೆ ನೀಡುತ್ತೇನೆ. ಇದರೊಂದಿಗೆ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ನಾಳೆ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ. ಯಾವ ಪಕ್ಷದಿಂದ ಸ್ಪರ್ಧೆ ಎಂಬುದನ್ನು ಮಧ್ಯಾಹ್ನದ ಬಳಿಕ ಹೇಳುತ್ತೇನೆ ಎಂದು ಹೇಳಿದ್ದಾರೆ.
ಟಿಕೆಟ್ ಗಾಗಿ ನಾನು ಪಕ್ಷ ಬಿಡುತ್ತಿಲ್ಲ. ನಗರದ ಋಣ ತೀರಿಸುವುದಕ್ಕಾಗಿ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ಈಶ್ವರಪ್ಪ ಕಣದಲ್ಲಿ ಇದ್ದರೆ. ನಾನು ಕೊಡುವ ಲೆಕ್ಕ ತುಂಬಾ ಇದೆ. ಆ ಲೆಕ್ಕ ಈ ಚುನಾವಣೆಯಲ್ಲಿ ಕೊಡುತ್ತೇನೆ. ಯಡಿಯೂರಪ್ಪ ಪರ ಹೇಳಿಕೆ ನೀಡಿದ ಏಕೈಕ ವ್ಯಕ್ತಿ ನಾನು. ಅವರ ಮೇಲೆ ಆರೋಪ ಸಮಸ್ಯೆಗಳು ಬಂದಾಗ ನಾನೇ ಒಬ್ಬನೇ ಅವರ ಪರ ಉತ್ತರ ಕೊಟ್ಟಿದ್ದೆ. ಮಹಾನಗರ ಪಾಲಿಕೆ ಕಮೀಷನ್ ದಂಧೆ ಬಗ್ಗೆ ನಾನೊಬ್ಬನೇ ಧ್ವನಿ ಎತ್ತಿದ್ದೆ ಎಂದು ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.