ಜಕಾರ್ತ: ಪ್ರವಾಸಕ್ಕೆಂದು ತೆರಳಿದ್ದ ರಷ್ಯಾದ (Russia) ಇನ್ಸ್ಟಾಗ್ರಾಮ್ (Instagram) ಸ್ಟಾರ್ ಒಬ್ಬಳು, ದೇವಸ್ಥಾನದ ಮರದ ಕೆಳಗೆ ನಗ್ನ ಫೋಟೋಶೂಟ್ ಮಾಡಿಸಿದ್ದಕ್ಕಾಗಿ ಇಂಡೋನೇಷ್ಯಾದ (Indonesia) ಬಾಲಿಯಿಂದ ಗಡಿಪಾರು ಮಾಡಲಾಗಿದೆ.
ನಗ್ನ ಫೋಟೋಶೂಟ್ ಮಾಡಿಸಿರುವುದು, ಬಾಲಿಯ ಹಿಂದೂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿ, ತೀವ್ರ ಪ್ರತಿಭಟನೆಯ ನಂತರ ಇಂಡೋನೇಷ್ಯಾ ಸರ್ಕಾರವು ಆ ಮಹಿಳೆಯನ್ನು ಗಡಿಪಾರು ಮಾಡಿದೆ. ರಷ್ಯಾದ 40ರ ಹರೆಯದ ಮಹಿಳೆ ಲೂಯ್ಜಾ ಕೊಶ್ಯಾಕ್ ಬಾಲಿ ಪ್ರವಾಸ ಕೈಗೊಂಡಿದ್ದರು. ಬಾಲಿಯ (Bali) ಸುಂದರ ತಾಣಗಳಲ್ಲಿ ಕೆಲವು ದಿನಗಳ ಕಾಲ ಕಳೆದ ಕೋಶ್ಯಾಕ್, ಬಾಲಿಯ ತಬನನ್ ದೇವಸ್ಥಾನ ವೀಕ್ಷಣೆಗೆ ತೆರಳಿದ್ದಳು.
ಈ ಸಂದರ್ಭದಲ್ಲಿ ಭಾರೀ ಗಾತ್ರದ ಮರ ಬಳಿ ನಗ್ನವಾಗಿ ನಿಂತು ಫೋಟೋಶೂಟ್ ಮಾಡಿಸಿಕೊಂಡಿದ್ದಾಳೆ. ಹಲವು ಫೋಟೋಗಳನ್ನು ತೆಗೆಸಿರುವ ಕೋಶ್ಯಾಕ್ ಅದನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆ, ಬಾಲಿಯ ಹಿಂದೂ ಸಮುದಾಯದ ಜನರು ತಿರುಗಿ ಬಿದ್ದಿದ್ದಾರೆ.
ಮಹಿಳೆಯ ಫೋಟೋಶೂಟ್ ಖಂಡಿಸಿ ಬಾಲಿಯ ಹಿಂದೂ ಸಮುದಾಯ ತೀವ್ರ ಪ್ರತಿಭಟನೆ ನಡೆಸಿದ ನಂತರ, ಕಾರ್ಯಪ್ರವೃತ್ತರಾದ ಇಂಡೋನೇಷ್ಯಾ ಅಧಿಕಾರಿಗಳು, ಲೂಯ್ಜಾ ಕೋಶ್ಯಾಕ್ ಬಂಧಿಸಿದ್ದಾರೆ. ಇಷ್ಟೇ ಅಲ್ಲ ಮತ್ತೆ ಇಂಡೋನೇಷ್ಯಾ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ. ತಬನನ್ ದೇವಸ್ಥಾನದ ಆವರಣದಲ್ಲಿರುವ ಈ ಪವಿತ್ರ ಮರ ಸುಮಾರು 700 ವರ್ಷಗಳಷ್ಟು ಹಳೆಯ ಮರವಾಗಿದೆ. ಕಳೆದ ವರ್ಷ ರಷ್ಯಾದ ಯೋಗಪಟು ಇದೇ ಮರದ ಬುಡದಲ್ಲಿ ಫೋಟೋ ತೆಗೆದು ವಿವಾದಕ್ಕೆ ಕಾರಣರಾಗಿದ್ದರು.