ಟ್ವಿಟರ್ (Twitter) ಸಂಸ್ಥೆಯು ದಿನಕ್ಕೊಂದು ವಿಷಯವಾಗಿ ಸುದ್ದಿಯಾಗುತ್ತಲೇ ಇದೆ. ಈ ಹಿಂದೆ ಅಧಿಕೃತ ಖಾತೆಗಾಗಿ ನೀಡಿದ್ದ ಬ್ಲೂಟಿಕ್ (Blue Tick) ಅನ್ನು ಈಗ ಅದು ತೆಗೆದು ಹಾಕಿದೆ. ಈ ಹಿಂದೆಯೇ ಸಂಸ್ಥೆಯು ಚೆಕ್ ಮಾರ್ಕ್ ಕುರಿತು ಪ್ರಕಟನೆಯನ್ನು ನೀಡಿತ್ತು. ಹಣ ಪಾವತಿ ಮಾಡಿದರೆ ಬ್ಲೂ ಟಿಕ್ ಮೊದಲಿನಂತೆಯೇ ಉಳಿಯುತ್ತದೆ ಎನ್ನುವ ಸಂದೇಶವನ್ನು ಹಲವಾರಿ ಬಾರಿ ನೀಡಿತ್ತು. ಕೆಲವರು ಹಣ ಪಾವತಿಸಿ ಬ್ಲೂಟಿಕ್ ಉಳಿಸಿಕೊಂಡಿದ್ದಾರೆ. ಇನ್ನೂ ಕೆಲವರು ಈಗ ಗೊಂದಲದಲ್ಲಿದ್ದಾರೆ.

ಹಣಪಾವತಿ ಮಾಡದ ಬಹುತೇಕ ಸಿಲೆಬ್ರಿಟಿಗಳ (Celebrity) ಬ್ಲೂಟಿಕ್ ನಿನ್ನೆಯೇ ಮಾಯವಾಗಿದೆ. ಸ್ಯಾಂಡಲ್ ವುಡ್ (Sandalwood) ನ ಯಶ್, ಸುದೀಪ್, ರಮ್ಯಾ ಸೇರಿದಂತೆ ಬಹುತೇಕ ನಟ ನಟಿಯರ ನೀಲಿ ಚಿಹ್ನೆ ಮಾಯವಾಗಿದೆ. ಸತೀಶ್ ನೀನಾಸಂ ಸೇರಿದಂತೆ ಬೆರಳೆಣಿಕೆಯ ಕಲಾವಿದರ ಬ್ಲೂಟಿಕ್ ಉಳಿದುಕೊಂಡಿದೆ. ಕಾರಣ ಅವರು ಸಬ್ ಸ್ಕ್ರೈಬ್ ಮಾಡಿಸಿಕೊಂಡು ಉಳಿಸಿಕೊಂಡಿದ್ದಾರೆ.

ಕೆಲವರು ಬ್ಲೂಟಿಕ್ ಕಳೆದುಕೊಂಡು ಗೊಂದಲದ್ಲ್ಲಿದ್ದಾರೆ. ನಟಿ ಖುಷ್ಬು ಸುಂದರ್ ‘ನನ್ನ ಖಾತೆ ಸಕ್ರೀಯವಾಗಿದ್ದರೂ ಬ್ಲೂಟಿಕ್ ಯಾಕೆ ಹೋಗಿದೆ?’ ಎಂದು ಪ್ರಶ್ನೆ ಮಾಡಿದ್ದಾರೆ.
ಬಹುಭಾಷಾ ನಟ ಪ್ರಕಾಶ್ ರಾಜ್ ವಿಭಿನ್ನವಾಗಿಯೇ ಪ್ರತಿಕ್ರಿಯೆ ನೀಡಿದ್ದು, ‘ಬೈ ಬೈ ಬ್ಲೂಟಿಕ್’ ಎಂದು ಟ್ವೀಟ್ ಮಾಡಿದ್ದಾರೆ.
ತೆಲುಗಿನ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ತಮ್ಮ ಖಾತೆಯ ಬ್ಲೂಟಿಕ್ ಉಳಿಸಿಕೊಂಡಿದ್ದಾರೆ. ಕಮಲ್ ಹಾಸನ್, ಜ್ಯೂನಿಯರ್ ಎನ್.ಟಿ.ಆರ್ ಅವರ ಖಾತೆಗಳು ಬ್ಲೂಟಿಕ್ ನಲ್ಲಿ ಇವೆ.

ಬ್ಲೂಟಿಕ್ ಉಳಿಸಿಕೊಳ್ಳಬೇಕಾದರೆ, ಇಂತಿಷ್ಟು ಹಣವನ್ನು ಸಂದಾಯ ಮಾಡಿ ಸಬ್ ಸ್ಕ್ರೈಬ್ ಆಗಬೇಕು ಎನ್ನುವುದು ಎಲೋನ್ ಮಸ್ಕ್ ಅವರ ಉದ್ದೇಶವಾಗಿದೆ. ಉಚಿತವಾಗಿ ಈ ಸೇವೆಯನ್ನು ಕೊಡುವುದಿಲ್ಲ ಎಂದು ಅವರು ಈ ಹಿಂದೆಯೇ ಹೇಳಿದ್ದರು. ಅದರಂತೆ ನಡೆದುಕೊಂಡಿದ್ದು, ಸೆಲೆಬ್ರಿಟಿಗಳು ಗೊಂದಲದಲ್ಲಿದ್ದಾರೆ,