Chennai: ಕೂಲ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಗೆಲುವಿನ ಅಭಿಯಾನ ಮುಂದುವರೆಸಿದೆ. ಕಾನ್ವೆ ಸ್ಫೋಟಕ ಬ್ಯಾಟಿಂಗ್ ಹಾಗೂ ರವೀಂದ್ರ ಜಡೇಜಾ ಸ್ಪಿನ್ ಜಾದುವಿನಿಂದಾಗಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದೆ. ಆರಂಭದಲ್ಲಿ ಅಬ್ಬರಿಸಿದರೂ ಮಧ್ಯಮ ಕ್ರಮಾಂಕದಲ್ಲಿ ಹೈದರಾಬಾದ್ ಬೌಲರ್‌ಗಳ ಬಿಗಿ ಹಿಡಿತಕ್ಕೆ ಸಿಕ್ಕಿದ ಚೆನ್ನೈ 19ನೇ ಓವರ್‌ನಲ್ಲಿ ಗೆಲುವಿನ ಮೊತ್ತ ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು. 135 ರನ್‌ಗಳ ಅಲ್ಪ ಮೊತ್ತದ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ 18.4 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 138 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಬೃಹತ್ ಮೊತ್ತ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಆರಂಭ ಪಡೆದಿತ್ತು. ಡಿವೋನ್ ಕಾನ್ವೆ ಹಾಗೂ ಋತುರಾಜ್ ಗಾಯಕ್ವಾಡ್ ಭರ್ಜರಿ ಸಿಕ್ಸರ್, ಬೌಂಡರಿಯ ಆಟವಾಡಿದ್ದರು. ಮೊದಲ ವಿಕೆಟ್ ಪತನಕ್ಕೆ ಈ ಜೋಡಿ 66 ಎಸೆತಗಳಲ್ಲಿ 87 ರನ್ ಗಳಿಸಿತ್ತು. ಈ ಸಂದರ್ಭದಲ್ಲಿ ಋತುರಾಜ್ ಗಾಯಕ್ವಾಡ್ 35 ರನ್ ಗಳಿ ಔಟ್ ಆದರು. ಆಗ ಮಧ್ಯಮ ಕ್ರಮಾಂಕದಲ್ಲಿ ಬಿಗಿ ಬೌಲಿಂಗ್ ಹಿಡಿತ ಸಾಧಿಸಿದ ಹೈದರಾಬಾದ್ ತಂಡ, ಅಜಿಂಕ್ಯಾ ರಹಾನೆ ಹಾಗೂ ಅಂಬಟಿ ರಾಯುಡು ಅವರನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿತ್ತು. ಇನ್ನೊಂದೆಡೆ ಕಾನ್ವೆ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಕೊನೆಯವರೆಗೂ ಹೋರಾಡಿದ ಕಾನ್ವೆ 57 ಎಸೆತಗಳಲ್ಲಿ 77 ರನ್ ಸಿಡಿಸಿದರು.
ಹೈದರಾಬಾದ್ ತಂಡ ರವೀಂದ್ರ ಜಡೇಜಾ ಸೇರಿದಂತೆ ಚೆನ್ನೈ ಬೌಲರ್‌ಗಳ ದಾಳಿಗೆ ತತ್ತರಿಸಿತು. ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಹಾಗೂ ಹ್ಯಾರಿ ಬ್ರೂಕ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲರಾದರು. ಆರಂಭದಲ್ಲೇ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಮುಂದಾದಾ ಬ್ರೂಕ್ 13 ಎಸೆತಗಲ್ಲಿ 18 ರನ್ ಗಳಿಸಿ ಔಟಾದರು. ಅಭಿಷೇಕ್ ಶರ್ಮಾ 26 ಎಸೆತಗಳಲ್ಲಿ 34 ರನ್ ಗಳಿಸಿದರು. ನಂತರದಲ್ಲಿ ಕಣಕ್ಕಿಳಿದ ಯಾರೊಬ್ಬರೂ ಉತ್ತಮ ಜೊತೆಯಾಟ ನೀಡದ ಕಾರಣ ಹೈದರಾಬಾದ್ ತಂಡ ಅಲ್ಪ ಮೊತ್ತಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ರಾಹುಲ್ ತ್ರಿಪಾಠಿ 21, ಏಡನ್ ಮಾರ್ಕ್ರಮ್ 12, ಹೆನ್ರಿಕ್ ಕ್ಲಾಸೆನ್ 17, ಮಯಾಂಕ್ ಅಗರ್ವಾಲ್ ಕೇವಲ 2, ವಾಷಿಂಗ್ಟನ್ ಸುಂದರ್ 9, ಮಾರ್ಕೊ ಜಾನ್ಸೆನ್ 17 ರನ್ ಗಳಿಸಿ ಔಟ್ ಆದರು. ಚೆನ್ನೈ ಪರ ರವೀಂದ್ರ ಜಡೇಜಾ 4 ಓವರ್‌ಗಳಲ್ಲಿ ಕೇವಲ 22 ರನ್ ನೀಡಿ 3 ವಿಕೆಟ್ ಕಬಳಿಸಿದರು. ಆಕಾಶ್ ಸಿಂಗ್, ಮಹೇಶ್ ತೀಕ್ಷಣ ಹಾಗೂ ಮತೀಶ ಪತಿರಾನ ತಲಾ ಒಂದು ವಿಕೆಟ್ ಪಡೆದರು.