ಕೂಲ್ ಧೋನಿ ಮತ್ತೊಂದು ದಾಖಲೆ ಬರೆದಿದ್ದಾರೆ. ಶುಕ್ರವಾರ ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಬ್ಯಾಟಿಂಗ್ನಲ್ಲಿ ಡೆವೋನ್ ಕಾನ್ವೆ ಮಿಂಚಿದರೆ, ಬೌಲಿಂಗ್ನಲ್ಲಿ ರವೀಂದ್ರ ಜಡೇಜಾ 4 ಓವರ್ಗೆ 22 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅತ್ಯುತ್ತಮ ಪ್ರದರ್ಶನ ತೋರಿದರು. ಒಂದು ಕ್ಯಾಚ್, ಒಂದು ರನೌಟ್ ಮತ್ತು ಸ್ಟಂಪ್ ಔಟ್ ಮಾಡುವುದರ ಮೂಲಕ ವಿಕೆಟ್ ಹಿಂಭಾಗದಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಕ್ಯಾಚ್ ಗಳನ್ನು ಪಡೆದ ವಿಕೆಟ್-ಕೀಪರ್ ಎಂಬ ಸಾಧನೆಯನ್ನು 41 ವರ್ಷದ ಎಂಎಸ್ ಧೋನಿ ನಿರ್ಮಿಸಿದ್ದಾರೆ. ಈ ಹಿಂದೆ ಕ್ವಿಂಟನ್ ಡಿಕಾಕ್ ಅವರು ಈ ದಾಖಲೆ ಮಾಡಿದ್ದರು. ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮೀರಿಸಿದ್ದಾರೆ.
ಧೋನಿ ಹಾಗೂ ಡಿಕಾಕ್ ಒಟ್ಟು 207 ಕ್ಯಾಚ್ಗಳನ್ನು ಪಡೆದು ನಂಬರ್ 1 ಸ್ಥಾನದಲ್ಲಿದ್ದರು. ಮಹೇಶ್ ತೀಕ್ಷಣ ಅವರ ಬೌಲಿಂಗ್ನಲ್ಲಿ ಆ್ಯಡಂ ಮಾರ್ಕ್ರಮ್ ಅವರ ಕ್ಯಾಚ್ ಅನ್ನು ಧೋನಿ ಪಡೆದ ಕೂಡಲೆ ಇತಿಹಾಸ ನಿರ್ಮಿಸಿದ್ದಾರೆ. ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಹೈದರಾಬಾದ್ ಆರಂಭ ನಿಧಾನ ಗತಿಯಿಂದ ಕೂಡಿತ್ತು. 13 ಎಸೆತಗಳಿಂದ 18 ರನ್ ಮಾಡಿ ಬ್ರೂಕ್ ಪೆವಿಲಿಯನ್ ಸೇರಿಕೊಂಡರು. ದ್ವಿತೀಯ ವಿಕೆಟಿಗೆ ಅಭಿಷೇಕ್ ಶರ್ಮ-ರಾಹುಲ್ ತ್ರಿಪಾಠಿ 36 ರನ್ ಪೇರಿಸಿದರು. ಎಸ್ಆರ್ಹೆಚ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು. ಜಡೇಜಾ 3 ವಿಕೆಟ್ ಪಡೆದರು.
ಚೆನ್ನೈಗೆ ಉತ್ತಮ ಆರಂಭ ದೊರೆಯಿತು. ಕಾನ್ವೆ ಮತ್ತು ಗಾಯಕ್ವಾಡ್ (35 ರನ್) 87 ರನ್ಗಳ ಜೊತೆಯಾಟ ಮಾಡಿದರು. ರಹಾನೆ 9 ರನ್ಗೆ ವಿಕೆಟ್ ಒಪ್ಪಿಸಿದರು. ಒಂದೆಡೆ ವಿಕೆಟ್ ಹೋಗುತ್ತಿದ್ದರೂ ಕಾನ್ವೆ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. 57 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸ್ನಿಂದ ಅಜೇಯ 77 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಸಿಎಸ್ಕೆ 18.4 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿ ಗೆಲುವು ಸಾಧಿಸಿತು.