ಗಡಿ ಕ್ಷೇತ್ರವಾಗಿರುವ ನಿಪ್ಪಾಣಿ (Nippani) ವಿಧಾನಸಭಾ ಕ್ಷೇತ್ರದಲ್ಲಿ ಮರಾಠಾ ಸಮುದಾಯದ ಪ್ರಾಭಲ್ಯ ಹೆಚ್ಚಾಗಿದೆ. ಈ ಕ್ಷೇತ್ರದಲ್ಲಿ ಮರಾಠಾ ಸಮುದಾಯ ಹಾಗೂ ಲಿಂಗಾಯತ ಮತದಾರರೇ ನಿರ್ಣಾಯಕರಾಗಿದ್ದು, ಬಜೆಪಿ ಹಾಗೂ ಕಾಂಗ್ರೆಸ್, ಎನ್ ಸಿಪಿ ಮಧ್ಯೆ ಬಿಗ್ ಫೈಟ್ ನಡೆಯುತ್ತಿದೆ.
ಸಚಿವೆ ಶಶಿಕಲಾ ಜೊಲ್ಲೆ (Shashikala Annasaheb Jolle) ಬಿಜೆಪಿ (BJP) ಅಭ್ಯರ್ಥಿಯಾಗಿದ್ದರೆ, ಕಾಂಗ್ರೆಸ್ (Congress) ಪಕ್ಷದಿಂದ ಕಾಕಾಸಾಹೇಬ್ ಪಾಟೀಲ್ (Kakasaheb Patil) ಕಣಕ್ಕೆ ಇಳಿದಿದ್ದಾರೆ. ಬಿಜೆಪಿ ಮುಖಂಡ ರಮೇಶ್ ಜಾರಕಿಹೊಳಿ ಆಪ್ತ ಉತ್ತಮ್ ಪಾಟೀಲ್ (Uttam Patil) ಮಹಾರಾಷ್ಟ್ರದ ಶರದ್ ಪವಾರ್ ಅವರ ಎನ್ಸಿಪಿ (NCP) ಪಕ್ಷದಿಂದ ಅಖಾಡಕ್ಕೆ ಇಳಿದಿದ್ದಾರೆ. ಎನ್ ಸಿಪಿ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಎನ್ಸಿಪಿ ಅಭ್ಯರ್ಥಿ ಉತ್ತಮ್ ಪಾಟೀಲ್ ಜೈನ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ನಿಪ್ಪಾಣಿ ಕ್ಷೇತ್ರದಲ್ಲಿ ಹಲವು ದಿನಗಳಿಂದ ಸಂಘಟನೆ ನಡೆಸಿ ವರ್ಚಸ್ಸು ಉಳಿಸಿಕೊಂಡಿದ್ದಾರೆ. ಉತ್ತಮ್ ಪಾಟೀಲ್ ಬಿಜೆಪಿ ಟಿಕೆಟ್ ವಂಚಿತರಾದ ಹಿನ್ನೆಲೆಯಲ್ಲಿ ಎನ್ಸಿಪಿ ಪಕ್ಷದಿಂದ ಕಣಕ್ಕೆ ಇಳಿದಿದ್ದಾರೆ. ಶರದ್ ಪವಾರ್ ಅವರ ಪ್ರಾಬಲ್ಯದಿಂದ ಮರಾಠಿಗರ ಮತಗಳನ್ನು ಪಡೆಯುವ ಪ್ಲಾನ್ ಜೊತೆಗೆ ತಮ್ಮ ಸಮುದಾಯದ ಜೈನರ ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುವ ವಿಶ್ವಾಸದಲ್ಲಿದ್ದಾರೆ. ಜಾರಕಿಹೊಳಿ ಕುಟುಂಬದ ಆಂತರಿಕ ಬೆಂಬಲ ಇವರಿಗೆ ಸಿಗಲಿದೆ ಎಂಬ ಮಾತು ಕೂಡ ಕೇಳಿಬರುತ್ತಿದೆ.
ಕಾಂಗ್ರೆಸ್ ಅಭ್ಯರ್ಥಿ ಕಾಕಾಸಾಹೇಬ್ ಪಾಟೀಲ್ ಮರಾಠಾ ಸಮುದಾಯಕ್ಕೆ ಸೇರಿದ್ದು, ಮರಾಠಾ ಸಮುದಾಯ ಕೈ ಹಿಡಿಯುವುದರ ಜೊತೆಗೆ ಕಾಂಗ್ರೆಸ್ ಪಕ್ಷದಿಂದ ಮತಗಳು ಬರುವ ನಿರೀಕ್ಷೆಯಲ್ಲಿದ್ದಾರೆ. ಇನ್ನು ಲಿಂಗಾಯತ ಸಮುದಾಯಕ್ಕೆ ಸೇರಿರುವ ಶಶಿಕಲಾ ಜೊಲ್ಲೆ ಅವರಿಗೆ ಲಿಂಗಾಯತ ಮತಗಳು ಕೈ ಹಿಡಿಯುವುದರ ಜೊತೆಗೆ ಮರಾಠಾ ಸಮುದಾಯದವರು ಹಿಂದುತ್ವದ ಆಧಾರದ ಮೇಲೆ ಬಿಜೆಪಿ ಪರ ಇರಲಿದ್ದಾರೆ. ಜೊತೆಗೆ ತಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು ಕೈ ಹಿಡಿಯಲಿವೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಮತದಾರರು ಯಾರ ಪರ ಇರಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಕೇಂದ್ರ ಸರ್ಕಾರದ ಬೆಲೆ ಏರಿಕೆಯ ಬಿಸಿ ಸಾಮಾನ್ಯ ಜನರ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಶಶಿಕಲಾ ಜೊಲ್ಲೆ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಸಂದರ್ಭದಲ್ಲಿ ಮೊಟ್ಟೆ ಡೀಲ್ ವಿಚಾರದಲ್ಲಿ ಆರೋಪ ಅವರ ಮೇಲೆ ಬಂದಿತ್ತು. ಇನ್ನೊಂದೆಡೆ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಶಶಿಕಲಾ ಜೊಲ್ಲೆ 81,860 ಮತಗಳನ್ನು ಗಳಿಸಿ ಭರ್ಜರಿಯಾಗಿಯೇ ಜಯಗಳಿಸಿದ್ದರು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಕಾಕಾಸಾಹೇಬ್ ಪಾಟೀಲ 63,198 ಮತಗಳನ್ನು ಗಳಿಸಿದ್ದರು. ಬಿಎಸ್ ಪಿಯಿಂದ ಸ್ಪರ್ಧಿಸಿದ್ದ ಸುಜೀತ್ ಮೆಹೆತ್ರಿ 1,771 ಮತಗಳನ್ನು ಗಳಿಸಿದ್ದರು. ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ನೋಡುವುದಾದರೆ ಕ್ಷೇತ್ರದಲ್ಲಿ ಮರಾಠಾ 50 ಸಾವಿರ, ಲಿಂಗಾಯತರು 40 ಸಾವಿರ, ಬ್ರಾಹ್ಮಣ 3 ಸಾವಿರ, ಎಸ್ಸಿ 20 ಸಾವಿರ, ಕುರುಬ 21 ಸಾವಿರ, ಮುಸ್ಲಿಂ 25 ಸಾವಿರ, ಇನ್ನಿತರ ಸಮುದಾಯದ ಮತಗಳು 10 ಸಾವಿರ ಮತದಾರರು ಇದ್ದಾರೆ.