ಭಾನುವಾರು ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲುವು ಸಾಧಿಸಿದ್ದ ಆರ್ಸಿಬಿ ತಂಡಕ್ಕೆ ದೊಡ್ಡ ಮೊತ್ತದ ದಂಡ ವಿಧಿಸಲಾಗಿದೆ.
ಆ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕಾಗಿ ಆರ್ಸಿಬಿ ತಂಡಕ್ಕೆ ಭಾರೀ ಮೊತ್ತದ ದಂಡ ವಿಧಿಸಲಾಗಿದೆ. ಓವರ್ ರೇಟ್ಗಾಗಿ ಆರ್ಸಿಬಿ ತಂಡದ ಹಂಗಾಮಿ ನಾಯಕ ವಿರಾಟ್ ಕೊಹ್ಲಿಗೆ 24 ಲಕ್ಷ ರೂ. ದಂಡ ವಿಧಿಸಿದರೆ, ಪ್ಲೇಯಿಂಗ್ ಇಲೆವೆನ್ನ ಭಾಗವಾಗಿದ್ದ ಉಳಿದ ಆಟಗಾರರಿಗೆ 6 ಲಕ್ಷ ರೂ. ಅಥವಾ ಪಂದ್ಯ ಶುಲ್ಕದ ಶೇ. 25ರಷ್ಟು ದಂಡ ವಿಧಿಸಲಾಗಿದೆ.
ಆರ್ಸಿಬಿ ತಂಡದ ನಾಯಕ 2ನೇ ಬಾರಿ ನಿಧಾನಗತಿಯಲ್ಲಿ ಓವರ್ ಮುಗಿಸಿದ್ದು, ಹೀಗಾಗಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ದಂಡ ವಿಧಿಸಲಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯಲ್ಲಿ ಓವರ್ಗಳನ್ನು ಮುಗಿಸಿದ್ದ ಪರಿಣಾಮ ಫಾಫ್ ಡುಪ್ಲೆಸಿಸ್ಗೆ 12 ಲಕ್ಷ ದಂಡ ವಿಧಿಸಲಾಗಿತ್ತು. ಸದ್ಯ ಆರ್ ಸಿಬಿ 2ನೇ ಬಾರಿ ತಪ್ಪನ್ನು ಪುನರಾವರ್ತಿಸಿದೆ.
ಹಂಗಾಮಿ ನಾಯಕ ವಿರಾಟ್ ಕೊಹ್ಲಿ ಮುಂದಿನ ಪಂದ್ಯದಲ್ಲಿಯೂ ಇದೇ ತಪ್ಪನ್ನು ಮಾಡಿದರೆ, ಒಂದು ಪಂದ್ಯದ ನಿಷೇಧಕ್ಕೆ ಒಳಗಾಗಲಿದ್ದಾರೆ. ಹೀಗಾಗಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ನಿಗದಿತ ಸಮಯದಲ್ಲಿ 20 ಓವರ್ಗಳನ್ನು ಪೂರ್ಣಗೊಳಿಸಬೇಕಾಗುತ್ತದೆ.
ಐಸಿಸಿ ನಿಯಮದಂತೆ, ಟಿ20 ಕ್ರಿಕೆಟ್ ನಲ್ಲಿ 20 ಓವರ್ ಗಳನ್ನು 1 ಗಂಟೆ 25 ನಿಮಿಷದೊಳಗೆ ಪೂರ್ಣಗೊಳಿಸಬೇಕು. ಹೆಚ್ಚಿನ ಸಮಯ ತೆಗೆದುಕೊಂಡರೆ ಉಳಿದ ಓವರ್ಗಳ ವೇಳೆ ಫೀಲ್ಡಿಂಗ್ ತಂಡವು ಬೌಂಡರಿ ಲೈನ್ ನಿಂದ ಒಬ್ಬ ಆಟಗಾರನನ್ನು 30 ಯಾರ್ಡ್ ಸರ್ಕಲ್ನಲ್ಲಿ ನಿಲ್ಲಿಸಬೇಕಾಗುತ್ತದೆ.