ಐಪಿಎಲ್ ನ ಪ್ರಸಕ್ತ ಟೂರ್ನಿಯಲ್ಲಿ ನಿನ್ನೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕೋಲ್ಕಾತ್ತಾ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ವಿಶೇಷ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.
ಟಾಸ್ ಗೆದ್ದ ಆರ್ ಸಿಬಿ ಮೊದಲು ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು ಜೇಸನ್ ರಾಯ್ (56) ಅವರ ಭರ್ಜರಿ ಅರ್ಧಶತಕದ ನೆರವಿನಿಂದ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 200 ರನ್ ಗಳ ಬೃಹತ್ ರನ್ ಗಳನ್ನು ಕಲೆ ಹಾಕಿತು.
201 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿದ ಆರ್ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಸ್ಪೋಟಕ ಆರಂಭ ಒದಗಿಸಿದರು.
ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಗೆ ಒತ್ತು ನೀಡಿದ ಕಿಂಗ್ ಕೊಹ್ಲಿ ಅವರು 33 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಈ ಅರ್ಧಶತಕದೊಂದಿಗೆ ವಿರಾಟ್ ಕೊಹ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 3000 ರನ್ ಗಳನ್ನು ಪೂರೈಸಿದ ಸಾಧನೆ ಮಾಡಿದ್ದಾರೆ. ಅದು ಕೂಡ ಕೇವಲ ಟಿ20 ಪಂದ್ಯಗಳ ಮೂಲಕ ಎಂಬುವುದು ತೀರಾ ವಿಶೇಷವಾಗಿತ್ತು.
ಈ ಮೂಲಕ ಒಂದೇ ಮೈದಾನದಲ್ಲಿ ಟಿ20 ಕ್ರಿಕೆಟ್ ನಲ್ಲಿ 3 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಆಟಗಾರ ಎಂಬ ವಿಶ್ವ ದಾಖಲೆಯನ್ನು ವಿರಾಟ್ ಕೊಹ್ಲಿ ಮಾಡಿದ್ದಾರೆ. ಆರ್ಸಿಬಿ ತವರು ಮೈದಾನದಲ್ಲಿಯೇ ಈ ದಾಖಲೆ ಮಾಡಿದ್ದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.