Bangalore : ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹಾಗೂ ವಿ. ಸೋಮಣ್ಣ ವಿರುದ್ಧ ಕಾಂಗ್ರೆಸ್ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಚುನಾವಣಾ (Elections) ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ (Congress) ಆಡಳಿತಕ್ಕೆ ಬಂದರೆ ಗಲಭೆಗಳು ಹಾಗೂ ಘರ್ಷಣೆಗಳು ನಡೆಯಲಿವೆ ಎಂದು ಮತದಾರರನ್ನು ಬೆದರಿಸಿದ್ದಾರೆ. ಬಿಜೆಪಿ ಹತಾಷೆಯಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದೆ. ಇಲ್ಲ ಸಲ್ಲದ ಹೇಳಿಕೆ ನೀಡಿರುವ ಅಮಿತ್ ಶಾ ಅವರನ್ನು ಬಂಧಿಸಬೇಕು ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ (Surjewala) ಮನವಿ ಮಾಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಈ ಕುರಿತು ಮಾತನಾಡಿ, ಕರ್ನಾಟಕದಲ್ಲಿ ಎಲ್ಲ ಸಮುದಾಯದವರು ಒಂದಾಗಿ ಬದುಕುತ್ತಿದ್ದಾರೆ. ಇಲ್ಲಿನ ಜನ ಶಾಂತಿ ಪ್ರಿಯರಾಗಿದ್ದಾರೆ. ಆದರೆ ಅಮಿತ್ ಶಾ, ಗಲಭೆ ನಡೆಯಲಿದೆ ಎಂದು ಬೆದರಿಕೆ ಒಡ್ಡುತ್ತಾರೆ. ಸಾಮಾನ್ಯ ಜನ ಈ ಹೇಳಿಕೆ ನೀಡಿದ್ದರೆ ಇಷ್ಟರಲ್ಲೇ ಅವರ ಬಂಧನವಾಗುತ್ತಿತ್ತು. ಶಾ ಹೇಳಿಕೆಗೆ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿ ಒತ್ತಾಯಿಸಿದ್ದಾರೆ.

ಸಚಿವ ವಿ.ಸೋಮಣ್ಣ ಚಾಮರಾಜನಗರ ಜೆಡಿಎಸ್ ಅಭ್ಯರ್ಥಿಗೆ ಬೆದರಿಕೆ ಹಾಗೂ ಆಮಿಷವೊಡ್ಡಿದ್ದಾರೆ. ಈ ಕುರಿತು ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಏ.25 ರಂದು ಅಮಿತ್ ಶಾ ಚುನಾವಣಾ ಪ್ರಚಾರದ ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಗಲಭೆ ನಡೆಯಲಿದೆ ಎಂದು ಹೇಳಿದ್ದರು.