bangalore : ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಬಿಜೆಪಿ (BJP) ಪಕ್ಷದ 50 ಲಕ್ಷ ಕಾರ್ಯಕರ್ತರೊಂದಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವರ್ಚುವಲ್ ಸಭೆ ನಡೆಸಿ, ಉತ್ಸಾಹ ಹೆಚ್ಚಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಕರ್ನಾಟಕದಲ್ಲಿ ಲೋಕ ತಂತ್ರದ ಉತ್ಸವ ನಡೆಯುತ್ತಿದೆ. ಬಿಜೆಪಿ ಸದಾ ಚುನಾವಣೆಗಳನ್ನು ಲೋಕ ತಂತ್ರದ ಹಬ್ಬದಂತೆ ಆಚರಿಸುತ್ತದೆ. ರಾಜ್ಯದ ಸಮೃದ್ಧ ಪರಂಪರೆಯ ಪ್ರತಿನಿಧಿಗಳಾಗಿದ್ದಾರೆ. ನಮ್ಮ ಕಾರ್ಯಕರ್ತರು ಬಿಜೆಪಿಯನ್ನು ದಾಖಲೆಯ ಸ್ಥಾನಗಳಲ್ಲಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಬೆನ್ನು ತಟ್ಟಿದ್ದಾರೆ.
ರಾಜ್ಯದ ಜನರ ದರ್ಶನಕ್ಕೆ, ಆಶೀರ್ವಾದಕ್ಕೆ ಬರುತ್ತಿದ್ದೇನೆ. ರಾಜ್ಯದಲ್ಲಿ ಎಲ್ಲೇ ಹೋದರೂ ಅಲ್ಲಿನ ಜನ ಹೃದಯ ಪೂರ್ವಕ ಆಶೀರ್ವಾದ ಮಾಡಿದ್ದಾರೆ. ಕರ್ನಾಟಕದ ಜನರ ವಿಶ್ವಾಸ ಬಿಜೆಪಿ ಮೇಲೆ ಎಷ್ಟಿದೆ ಎಂಬುದು ಎಲ್ಲರಿಗೂ ಗೊತ್ತು. ರಾಜ್ಯ ಬಿಜೆಪಿ ಘಟಕ ಇಷ್ಟೊಂದು ದೊಡ್ಡ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನಾರ್ಹ ಎಂದು ಹೇಳಿದ್ದಾರೆ.
ಬಿಜೆಪಿ ಪಕ್ಷವು ಶಾರ್ಟ್ ಕಟ್ ದಾರಿಯಲ್ಲಿ ಹೋಗುವುದಿಲ್ಲ. ನಮಗೆ ದೇಶದ ಭವಿಷ್ಯ ಬೇಕು. ನಾವು 5 ವರ್ಷ ಅಷ್ಟೇ ಆಡಳಿತ ಗುರಿ ಇಟ್ಟುಕೊಂಡಿಲ್ಲ. ನಮ್ಮ ಕನಸು ದೇಶದ ಭವಿಷ್ಯ ಉತ್ತಮ, ಸುರಕ್ಷೆಯಾಗಿಡುವುದು. ಮುಂದಿನ 25 ವರ್ಷ ದೇಶದ ಚಿತ್ರಣ ಬದಲಾಗಲಿದೆ ಎಂದು ಕಾಂಗ್ರೆಸ್‌ನ ಉಚಿತ ಯೋಜನೆಗಳಿಗೆ ಮೋದಿ ಹೇಳಿದ್ದಾರೆ.
ಮೆಡಿಕಲ್, ನರ್ಸಿಂಗ್ ಕಾಲೇಜುಗಳನ್ನು ನಿರ್ಮಿಸಿದ್ದರೆ ನಮಗೆ ಈಗ ವೈದ್ಯರ, ವೈದ್ಯ ಸಿಬ್ಬಂದಿಯ ಕೊರತೆ ಕಾಣಿಸುತ್ತಿರಲಿಲ್ಲ. ಉಚಿತ ಘೋಷಣೆಗಳ ಮೂಲಕ ಜನರನ್ನು ಮೂರ್ಖರನ್ನಾಗಿಸಲು ಕಾಂಗ್ರೆಸ್ ಹೊರಟಿದೆ. ಕಾಂಗ್ರೆಸ್ ಎಂದರೆ ಸುಳ್ಳಿನ ಗ್ಯಾರಂಟಿ. ಕಾಂಗ್ರೆಸ್ ಎಂದರೆ ಭ್ರಷ್ಟಾಚಾರದ ಗ್ಯಾರಂಟಿ. ಕಾಂಗ್ರೆಸ್ ವಾರಂಟಿ ಈ ಮೊದಲೇ ಮುಗಿದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.