Bangalore: ಕರೆನ್ಸಿ ಟ್ರೇಡಿಂಗ್ ನಡೆಸುವುದಾಗಿ ಹೇಳಿ 870ಕ್ಕೂ ಅಧಿಕ ಜನರಿಗೆ ಬರೋಬ್ಬರಿ 31 ಕೋಟಿ ರೂ.ಗೂ ಅಧಿಕ ಹಣ ವಂಚಿಸಿರುವ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಾಗದೇವನಹಳ್ಳಿಯ ಜ್ಞಾನಭಾರತಿ ಬಡಾವಣೆಯ ನಿವಾಸಿ ಅಶೋಕ್ ಮೊಗವೀರ (52), ಯಲಹಂಕದ ಜೆ.ಜೋಜಿಪೌಲ್ (29) ಬಂಧಿತರು. ಅಮಾಯಕ ಗ್ರಾಹಕರನ್ನು ಗುರುತಿಸಿ ಕರೆನ್ಸಿ ಟ್ರೇಡಿಂಗ್ ಬಿಜಿನೆಸ್ ಮಾಡುವುದಾಗಿ ನಂಬಿಸುತ್ತಿದ್ದರು. ನಮ್ಮ ಸ್ಯಾಂಜೋಸ್ ವೆಲ್ತ್ ಮ್ಯಾನೇಜ್‌ಮೆಂಟ್‌ನಲ್ಲಿ ಹಣ ಹೂಡಿಕೆ ಮಾಡಿದವರಿಗೆ ಶೇ.5 ರಿಂದ ಶೇ.15ರ ವರೆಗೆ ಹೂಡಿಕೆ ಮಾಡಿದ ಹಣಕ್ಕೆ 36 ದಿನಗಳಿಗೆ ಪೇ ಔಟ್ ನೀಡುವುದಾಗಿ ನಂಬಿಸಿದ್ದರು. ನಮ್ಮ ಸಂಸ್ಥೆಗೆ ಹಣ ಹೂಡಿಕೆ ಮಾಡಿಸಿದವರಿಗೂ ಶೇ.2 ರಿಂದ ಶೇ.5ರಷ್ಟು ಕಮಿಷನ್ ನೀಡುತ್ತೇವೆ ಎಂದು ಹೇಳುತ್ತಿದ್ದರು. ಆಶ್ವಾಸನೆ ಕೊಟ್ಟು ಇದುವರೆಗೆ ಸುಮಾರು 870ಕ್ಕೂ ಹೆಚ್ಚಿನ ಸಾರ್ವಜನಿಕರಿಂದ 31ಕೋಟಿಗೂ ಅಧಿಕ ಹಣ ಹೂಡಿಕೆ ಮಾಡಿಸಿಕೊಂಡಿರುವ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರಿಂದ ಹೂಡಿಕೆ ಮಾಡಿಸಿಕೊಂಡ ಹಣದಲ್ಲಿ ಆರೋಪಿಗಳು ಯಾವುದೇ ಟ್ರೇಡಿಂಗ್ ಮಾಡುತ್ತಿರಲಿಲ್ಲ. ಹೆಚ್ಚಿನ ದರದಲ್ಲಿ ಪೇ ಔಟ್ ಮತ್ತು ಗ್ರಾಹಕರಿಂದ ಹಣ ಹೂಡಿಕೆ ಮಾಡಿಸಿದ ಮಧ್ಯವರ್ತಿಗಳಿಗೆ ಕಮಿಷನ್ ರೂಪದಲ್ಲಿ ಹಣ ನೀಡುತ್ತಿದ್ದರು. ಉಳಿದ ಹಣದಲ್ಲಿ ಸ್ಯಾಂಜೋಸ್ ವೆಂಚರ್, ಗ್ರಾವಿಟಿ ಸ್ಪೋರ್ಟ್ಸ್, ಗ್ರಾವಿಟಿ ಕ್ಲಬ್ ರೆಸಾರ್ಟ್ ಪ್ರೈ, ಇಂಡಿಯಾ ಲಿ. ಹೆಸರಿನಲ್ಲಿ ತಮ್ಮ ಸ್ವಂತ ವ್ಯವಹಾರಗಳಿಗೆ ಹಣ ಬಳಸಿಕೊಂಡಿದ್ದರು. ಹಣ ಹಿಂತಿರುಗಿಸುವಂತೆ ಒತ್ತಾಯಿಸುತ್ತಿದ್ದ ಗ್ರಾಹಕರಿಗೆ ಸಬೂಬು ಹೇಳಿ ಎಲ್ಲ ಲಾಭಾಂಶ ಸೇರಿಸಿ ಕೆಲ ತಿಂಗಳುಗಳಲ್ಲೇ ಹಿಂತಿರುಗಿಸುವುದಾಗಿ ನಂಬಿಸುತ್ತಿದ್ದರು. ಹೀಗಾಗಿ ಆರೋಪಿಗಳ ವಿರುದ್ಧ ದೂರು ನೀಡಲು ಗ್ರಾಹಕರು ಹಿಂದೇಟು ಹಾಕುತ್ತಿದ್ದರು ಎನ್ನಲಾಗಿದೆ.