Ballari : ರಾಜ್ಯದಲ್ಲಿ ಚುನಾವಣೆಯ ಹವಾ ಜೋರಾಗಿದೆ. ಎಲ್ಲ ಪಕ್ಷಗಳ ನಾಯಕರು ವಿಶ್ರಾಂತಿ ಪಡೆಯದೆ ಪ್ರಚಾರ ಕೈಗೊಂಡಿದ್ದಾರೆ. ಈ ಮೂಲಕ ಜನರ ಮನಸ್ಸು ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಬಳ್ಳಾರಿ ಹಾಗೂ ಕಲಬುರಗಿಯಲ್ಲಿ ಪ್ರಚಾರ ಕೈಗೊಂಡಿದ್ದು, ಮಳೆ ಬಂದರೂ ಭಾಷಣ ಮಾಡಿದ್ದಾರೆ.
ಜೇವರ್ಗಿಯಲ್ಲಿ ಅಜಯ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಸಮಾವೇಶ ನಡೆದಿತ್ತು. ರಾಹುಲ್ ಗಾಂಧಿ ಆಗಮನಕ್ಕೂ ಮುನ್ನವೇ ಮಳೆ ಆರಂಭವಾಗಿತ್ತು. ಮಳೆಯಿಂದ ರಕ್ಷಣೆ ಪಡೆಯಲು ಕ್ರೀಡಾಂಗಣದ ಗ್ಯಾಲರಿಯಲ್ಲಿ ಜನರು ಆಶ್ರಯ ಪಡೆದರು. ನೂರಾರು ಜನ ತಲೆ ಮೇಲೆ ಕುರ್ಚಿ ಹೊತ್ತು ಕಾರ್ಯಕ್ರಮದಲ್ಲಿ ಭಾಗಿಯಾದರು. ಆದರೆ, ಮಳೆಯನ್ನು ಲೆಕ್ಕಿಸದೆ, ರಾಹುಲ್ ಗಾಂಧಿ ಭಾಷಣ ಮಾಡಿದ್ದಾರೆ.
ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಹಾರಾಟಕ್ಕೆ ತೊಂದರೆಯಾಗಿದ್ದು, ರಾಹುಲ್ ಗಾಂಧಿ ರಸ್ತೆ ಮೂಲಕ ಜೇವರ್ಗಿಗೆ ತೆರಳಿದ್ದರು. ಜೋರು ಗಾಳಿ ಮಳೆ ಹಿನ್ನೆಲೆ ವೇದಿಕೆ ಮೇಲಿನ ಕಟೌಟ್, ವೇದಿಕೆ ಎದುರು ಹಾಕಲಾಗಿದ್ದ ಟೆಂಟ್ ಎಲ್ಲವೂ ಕಿತ್ತುಹೋಗಿತ್ತು. ಬಳ್ಳಾರಿಗೆ ಆಗಮಿಸಿದ್ದ ರಾಹುಲ್ ಗಾಂಧಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಬಿ ನಾಗೇಂದ್ರ ಹಾಗೂ ಬಳ್ಳಾರಿ ನಗರ ಅಭ್ಯರ್ಥಿ ಭರತ ರೆಡ್ಡಿ ಪರವಾಗಿ ಪ್ರಚಾರ ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ರೋಡ್ ಶೋ ನಡೆದಿತ್ತು. ಬಿಜೆಪಿಯವರು ನಮ್ಮ ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಿದ್ದಾರೆ. ಈ ಭ್ರಷ್ಟ ಸರ್ಕಾರವನ್ನು ಕಿತ್ತು ಹಾಕಬೇಕು. ಕಾಂಗ್ರೆಸ್ ಗೆ 140-150 ಸೀಟ್ ಗೆಲ್ಲಿಸಬೇಕಾಗಿದೆ ಎಂದು ಮಳೆಯಲ್ಲಿಯೇ ಭಾಷಣ ಮಾಡಿದ್ದಾರೆ.